
ಜ.6, 7, 8 ರಂದು 45ನೇ ರಾಜ್ಯ ಮಟ್ಟದ ಕ್ರೀಡಾಕೂಟ: ಕರ್ನಾಟಕ ಪಾಲಿಟೆಕ್ನಿಕ್‌ನ ಅಮೃತ ಮಹೋತ್ಸವ
ಮಂಗಳೂರು: 1946ರಿಂದ ಮಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಪಾಲಿಟೆಕ್ನಿಕ್ ತನ್ನ 75 ವರ್ಷ ಪೂರೈಸಿದ ಸಲುವಾಗಿ ಜ.6, 7 ಮತ್ತು 8 ರಂದು 45ನೇ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಅಮೃತಮಹೋತ್ಸವ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಹರೀಶ್ ಶೆಟ್ಟಿ ಹೇಳಿದರು.
ಅವರು ಇಂದು ತಮ್ಮ ಕಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಜ.6 ರಂದು 45ನೇ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ನೋಂದಣಿ ಮತ್ತು ವರದಿ ಪ್ರಕ್ರಿಯೆ ನಡೆಯಲಿದ್ದು, ಜ.7 ಮತ್ತು 8 ರಂದು ಪುರುಷ ಮತ್ತು ಮಹಿಳಾ ವಿಭಾಗದ ಕ್ರೀಡಾಕೂಟ ನಡೆಯಲಿದೆ. ಜ.7 ರಂದು ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಕ್ರೀಡಾಕೂಟವನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಕ್ರೀಡಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾಜ್ಯ ಪ್ರತಿಪಕ್ಷ ನಾಆಯಕ ಆರ್. ಅಶೋಕ್ ಉಪಸ್ಥಿತರಿರಲಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರುಗಳಾದ ಕ್ಯಾ. ಬ್ರಿಜೇಶ್ ಚೌಟ, ಡಿ. ವೀರೇಂದ್ರ ಹೆಗ್ಗಡೆ, ಶಾಸಕರುಗಳಾದ ಡಾ. ಭರತ್ ಶೆಟ್ಟಿ ವೈ., ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಉಮಾನಾಆಥ ಎ. ಕೋಟ್ಯಾನ್, ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ. ಎಸ್.ಎಲ್. ಭೋಜೇಗೌಡ, ಐವನ್ ಡಿಸೋಜಾ, ಪ್ರತಾಪಸಿಂಹ ನಾಯಕ್ ಕೆ., ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಬಿ.ಆರ್., ಮನಪಾ ಮೇಯರ್ ಮನೋಜ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಕ್ರೀಡಾಕೂಟಕ್ಕೆ 2000 ಜನ ಭಾಗವಹಿಸಲಿದ್ದು, 500 ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. 500 ಪಾಲಿಟೆಕ್ನಿಕ್ ಕಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ 3.5 ಕೋಟಿ ವೆಚ್ಚದಲ್ಲಿ ಹಳೆವಿದ್ಯಾರ್ಥಿಗಳಿಂದ ನೂತನ ಸಭಾ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು.
ಈ ಕಾಲೇಜಿನಲ್ಲಿ ಈಗಾಗಲೇ 25 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸಿದ್ದು, ಪ್ರತೀ ವರ್ಷ 450 ವಿದ್ಯಾರ್ಥಿಗಳು ಹೊರಹೋಗುತ್ತಿದ್ದಾರೆ. 2017 ರಿಂದ ಉದ್ಯೋಗಸ್ಥರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಂಜೆ ಪಾಲಿಟೆಕ್ನಿಕ್ ಕಾಲೇಜು ಕೂಡ ನಡೆಯುತ್ತಿದೆ ಎಂದು ಹೇಳಿದರು.
ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀಕಾಂತ್, ಉಪನ್ಯಾಸಕರುಗಳಾದ ಹರೀಶ್ ಸಿ.ಪಿ., ವಿಶ್ವನಾಥ ಮಣೆ, ವಿನೋದ ಕುಮಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಾನಂದ ಎಂ.ಸಿ. ಉಪಸ್ಥಿತರಿದ್ದರು.