ಕೈಚಾಚೋದು ಬಿಟ್ಟು ಸ್ವಾಭಿಮಾನದಿಂದ ವಿದ್ಯುತ್ ಉತ್ಪಾದಿಸಿ: ಸಚಿವ ಪ್ರಹ್ಲಾದ್ ವಿ. ಜೋಶಿ

ಕೈಚಾಚೋದು ಬಿಟ್ಟು ಸ್ವಾಭಿಮಾನದಿಂದ ವಿದ್ಯುತ್ ಉತ್ಪಾದಿಸಿ: ಸಚಿವ ಪ್ರಹ್ಲಾದ್ ವಿ. ಜೋಶಿ


ಮಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಯನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ಜೋಶಿ, ಯಾವುದಾದರೂ ಸರ್ಕಾರಕ್ಕೆ ಕೈಚಾಚಿ ತೆಗೆದುಕೊಳ್ಳುವುದಕ್ಕಿಂತ ಸೂರ್ಯಘರ್ ಮೂಲಕ ಸ್ವಾಭಿಮಾನದಿಂದ ವಿದ್ಯುತ್ ಉತ್ಪಾದನೆ ಮಾಡಿ, ಇದು ಕೂಡ ಉಚಿತವೇ ಆಗಲಿದೆ ಎಂದು ಕೇಂದ್ರ ಹೊಸ, ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ವಿ. ಜೋಶಿ ಹೇಳಿದರು.

ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ದ.ಕ. ಜಿಲ್ಲಾಡಳಿತ, ಜಿ.ಪಂ., ಮೆಸ್ಕಾಂ, ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಪ್ರಧಾನಮಂತ್ರಿ ಸೂರ್ಯಘರ್-ಮುಫ್ತಿ ಬಿಜ್ಲಿ ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಸೋಲಾರ್ ಶಕ್ತಿಯಲ್ಲಿ ಸ್ವಾವಲಂಬನೆಯ ಜತೆಗೆ ದೇಶದಲ್ಲೀಗ ಬ್ಯಾಟರಿ ಶಕ್ತಿ ಸಂಗ್ರಹಣೆ ಬಗ್ಗೆ ಗಂಭೀರ ಗಮನ ಹರಿಸಲಾಗುತ್ತಿದ್ದು, ಇದು ಸಾಧ್ಯವಾದರೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಉಂಟಾಗಲಿದೆ ಎಂದು ಹೇಳಿದ್ದಾರೆ.

ಉತ್ಪಾದನಾ ಹಬ್ ಆಗಿ ಭಾರತ:

ಇದೀಗ ಭಾರತವು ಜಗತ್ತಿನ ೫ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕೆಲವೇ ಸಮಯದಲ್ಲಿ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲೂ ಉತ್ಪಾದನೆ ಮತ್ತು ಹೂಡಿಕೆ ಸಾಕಷ್ಟು ಪ್ರಮಾಣದಲ್ಲಿ ಆಗಬೇಕಿದೆ. ಜಗತ್ತಿನ ಉತ್ಪಾದನಾ ಹಬ್ ಆಗಿ ಭಾರತ ಬೆಳೆದರೆ ಇದೀಗ ಚೀನಾಕ್ಕಿರುವ ‘ವರ್ಲ್ಡ್ ಫ್ಯಾಕ್ಟರಿ’ ಹೆಸರು ಭಾರತಕ್ಕೆ ಸಿಗಲಿದೆ ಎಂದರು.


ಸೂರ್ಯಘರ್‌ನಿಂದ 30 ಗಿ.ವ್ಯಾ. ಶಕ್ತಿ ಗುರಿ:

ಪ್ರಸ್ತುತ ದೇಶದಲ್ಲಿ 93.5 ಗಿಗಾ ವ್ಯಾಟ್ ಶಕ್ತಿಯ ಉತ್ಪಾದನೆ ಆಗುತ್ತಿದ್ದು, ಈ ಪೈಕಿ 2.3 ಗಿ.ವ್ಯಾ. ಸೌರಶಕ್ತಿ, 45 ಗಿ.ವ್ಯಾ. ಗಾಳಿಯಿಂದ ಶಕ್ತಿ ಉತ್ಪಾದನೆ ಆಗುತ್ತಿದ್ದರೆ, ಉಳಿದದ್ದು ನ್ಯೂಕ್ಲಿಯರ್, ಹೈಡ್ರೋ ಸ್ಥಾವರ ಇತ್ಯಾದಿಗಳಿಂದ ಉತ್ಪಾದನೆಯಾಗುತ್ತಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಯೋಜನೆ ಸೂರ್ಯಘರ್‌ನಲ್ಲಿ ಸಾಕಷ್ಟು ಸಬ್ಸಿಡಿ ಒದಗಿಸಲಾಗುತ್ತಿದೆ. ಈ ಯೋಜನೆಯೊಂದರಿಂದಲೇ ದೇಶದಲ್ಲಿ 30 ಗಿ.ವ್ಯಾ. ಶಕ್ತಿ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. ತನ್ಮೂಲಕ 70 ಗಿ.ವ್ಯಾ. ಶಕ್ತಿಯನ್ನು ನವೀಕರಿಸಬಹುದಾದ ಇಂಧನದಿಂದ ಉತ್ಪಾದನೆ ಮಾಡುವ ಉದ್ದೇಶ ಇದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಶಕ್ತಿಯ ಉತ್ಪಾದನೆಯಲ್ಲಿ ಭಾರೀ ದೊಡ್ಡ ಪರಿವರ್ತನೆ ದೇಶದಲ್ಲಿ ಆರಂಭವಾಗಿದೆ. 2012ರಲ್ಲಿ ವಿದ್ಯುತ್ ಕೊರತೆಯಿಂದ ಮೂರು ದಿನ ಇಡೀ ಉತ್ತರ ಭಾರತಕ್ಕೆ ವಿದ್ಯುತ್ ಪೂರೈಕೆ ಆಗಿರಲಿಲ್ಲ. ಈಗ ವಿದ್ಯುತ್ ರಫ್ತು ಮಾಡುವಷ್ಟು ಮುಂದುವರಿದಿದ್ದೇವೆ. ದೇಶವನ್ನು ಮುಂದಿನ ಜನಾಂಗಕ್ಕೆ ಅತ್ಯಂತ ಸುರಕ್ಷಿತವಾಗಿ ಬಿಟ್ಟು ಹೋಗುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಸೂರ್ಯಘರ್ ಕೂಡ ಒಂದು ಎಂದು ಹೇಳಿದರು.

2024 ಭಾರತವೂ ಸೇರಿದಂತೆ ಜಗತ್ತಿನಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. 250ರವರೆಗೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಭೂಮಿ ಬಿಸಿಯಾಗಲಿದೆ. ಪ್ರಸ್ತುತ ಸ್ಥಿತಿಯನ್ನು ಇದೇ ರೀತಿ ಬಿಟ್ಟರೆ ದೇಶದ ಶೇ.19ರಷ್ಟು ಒಟ್ಟು ಆದಾಯ ಮತ್ತು ಜಿಡಿಪಿ ದರ ಕುಸಿಯಲಿದೆ. ಈಗಾಗಲೇ ಜಾಗತಿಕ ತಾಪಮಾನದ ಪರಿಣಾಮಗಳ ಕುರಿತು ಚರ್ಚೆ ಶುರುವಾಗಿದೆ. ಇದಕ್ಕೆ ಪರಿಹಾರವೆಂದರೆ ಕಲ್ಲಿದ್ದಲಿನಂತಹ ಇಂಧನಗಳಿಂದ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಇಳಿಸಿ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಗಮನ ಹರಿಸಬೇಕು. ಅಂತಹ ಪರಿವರ್ತನೆ ದೇಶದಲ್ಲೀಗ ಆಗುತ್ತಿದೆ. ಇದರಲ್ಲಿ ಒಂದು ಸಲ ಹೂಡಿಕೆ ಮಾಡಿದರೆ ಪರಿಸರದ ಉಳಿವಿನ ಜತೆಗೆ ಬೇಕಾದಷ್ಟು ವಿದ್ಯುತ್, ಶಕ್ತಿಯ ಉತ್ಪಾದನೆಯೂ ಆಗಲಿದೆ ಎಂದು ಜೋಶಿ ಹೇಳಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ಇದೇ ಸಂದರ್ಭ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಮಂಜೂರಾತಿ ಪತ್ರ, ಸಾಲ ಮಂಜೂರಾತಿ ಪತ್ರವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿತರಿಸಿದರು.

ಶಾಸಕರಾದ ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಭಾನುಮತಿ, ಮೆಸ್ಕಾಂ ಎಂಡಿ ಜಯಪ್ರಕಾಶ್ ಆರ್., ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ಮೆಸ್ಕಾಂನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article