
ಕೋಟೆಕಾರು ದರೋಡೆ ಪ್ರಕರಣ: ಗೋಣಿಚೀಲದೊಂದಿಗೆ 700 ಕಿ.ಮೀ. ಕಾರಿನಲ್ಲಿ ಪ್ರಯಾಣ
ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ. ರೋಡ್ ಶಾಖೆಯಲ್ಲಿ ಜ.17ರಂದು ನಡೆದ ಭಾರೀ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ ಪ್ರಕರಣದ ಹಿಂದಿನ ರೋಚಕ ವಿಷಯಗಳು ಬಯಲುಗೊಳ್ಳುತ್ತಿದೆ.
ದರೋಡೆಯ ನಂತರ ದುಷ್ಕರ್ಮಿಗಳು ದರೋಡೆಗೈ ಚಿನ್ನವಿದ್ದ ಗೋಣಿ ಸಹಿತ 700 ಕಿ.ಮೀ ಕಾರಿನಲ್ಲೇ ಪ್ರಯಾಣಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನಿಂದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು.
ದರೋಡೆಕೋರರ ಜಾಡು ಹಿಡಿದು ಹೊರಟಿದ್ದ ಮಂಗಳೂರು ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಪತ್ತೆಯಾಗಿದೆ. ನಂತರ ಕಾರಿನ ಚೇಸಿಸ್ ನಂಬರ್ ಆಧಾರದಲ್ಲಿ ಕಾರಿನ ನೈಜ ಮಾಲಕನ ಮಾಹಿತಿ ಸಂಗ್ರಹಿಸಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಮಂಗಳೂರು ಪೊಲೀಸರಿಗೆ ಮೂವರು ಆಗಂತುಕರ ಜಾಡು ಪತ್ತೆಯಾಗಿದೆ.
ಕಾರು ಚಲಾಯಿಸಿದ್ದು ತೇವರ್..:
ದರೋಡೆ ಪ್ರಮುಖ ಅರೋಪಿ ಮುರುಗಂಡಿ ತೇವರ್ ತಿರುನಲ್ವೇಲಿ ತನಕ ಕಾರು ಚಲಾಯಿಸಿದ್ದ. ದರೋಡೆಕೋರರು ಪರಾರಿಯಾಗಲು ಬಳಸಿದ್ದು ಮಹಾರಾಷ್ಟ್ರ ಮೂಲದ ಫಿಯೇಟ್ ಕಾರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಮುಂಬೈ ಹಾಗೂ ತಮಿಳುನಾಡು ಮೂಲದ ನಟೋರಿಯಸ್ ಗ್ಯಾಂಗ್ ದರೋಡೆ ಮಾಡಿದೆ.
ಎರಡು ತಿಂಗಳ ಹಿಂದೆ ಸ್ಕೆಚ್..
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುರುಗಂಡಿ ತೇವರ್ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಆ ಬಳಿಕ ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಯೋಜನೆ ರೂಪಿಸಿಕೊಂಡು ತಂಡದ ಜೊತೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರು ಮಂದಿಯ ತಂಡ..:
ದರೋಡೆ ಮಾಡುವುದಕ್ಕೆಂದು ಯೊಸುವ ರಾಜೇಂದ್ರನ್ , ಕಣ್ಣನ್ ಮಣಿ ಹಾಗೂ ಇತರೆ ಅರು ಜನರ ಜೊತೆ ಮುರುಗಂಡಿ ದೇವರ್ ಬಂದಿದ್ದ. ಆದರೆ, ಐದು ಜನರಷ್ಟೇ ಫಿಯೇಟ್ ಕಾರಿನಲ್ಲಿ ಬಂದು ದರೋಡೆ ಮಾಡಿದ್ದರು. ಓರ್ವ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿದ್ದ.