ಕೋಟೆಕಾರು ದರೋಡೆ ಪ್ರಕರಣ: ಬೆಳಕಿಗೆ ಬಂದ ನಕಲಿ ನಂಬರ್ ಪ್ಲೇಟ್ ಜಾಲ...!

ಕೋಟೆಕಾರು ದರೋಡೆ ಪ್ರಕರಣ: ಬೆಳಕಿಗೆ ಬಂದ ನಕಲಿ ನಂಬರ್ ಪ್ಲೇಟ್ ಜಾಲ...!

ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ. ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದ ತನಿಖೆ ವೇಳೆ  ರಾಜ್ಯಾದ್ಯಂತ ಸಾವಿರಾರು ವಾಹನಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿರುವ  ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಫಿಯೆಟ್ ಕಾರಿನಲ್ಲಿ ತಲಪಾಡಿ ಟೋಲ್ ಮೂಲಕ ತೆರಳಿದ್ದಾರೆ ಎಂಬುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇನ್ನೊಂದು ಕಾರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಿಂದ ಸಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ನಕಲಿ ನಂಬರ್ ಪ್ಲೇಟ್‌ನ ಪ್ರಕರಣಗಳು ಬೆಳಕಿಗೆಎ ಬಂದಿದೆ. ನಕಲಿ ನಂಬರ್ ಪ್ಲೇಟ್ ಆಳವಡಿಸಿದ ಹತ್ತಾರು ವಾಹನಗಳು ಟೋಲ್ ಗೇಟ್ ಮೂಲಕ ಸಾಗಿರುವುದು ಪತ್ತೆಯಾಗಿದೆ.

ನಂಬರ್ ಫಾಸ್ಟ್ ಟ್ಯಾಗ್ ಬೇರೆ ಬೇರೆ..:

ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಬ್ಯಾಂಕ್ ದರೋಡೆಕೋರರು ಸಾಗಿರುವ ಶಂಕೆಯಿಂದ ಪರಿಶೀಲಿಸಿದ್ದರೂ, ಅವರು ಸರ್ವಿಸ್ ರಸ್ತೆಯ ಮೂಲಕ ತೆರಳಿದ್ದಾರೆ ಎಂಬುದು ಬಳಿಕ ಗೊತ್ತಾಗಿದೆ. ಆದರೆ, ಆ ಟೋಲ್ ಗೇಟ್‌ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರು, ಟೆಂಪೋ ಟ್ರಾವೆಲ್ಲರ್, ಲಾರಿ ಸೇರಿದಂತೆ ಹತ್ತಾರು ವಾಹನಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಅಂದರೆ ವಾಹನದಲ್ಲಿ ಇರುವ ನಂಬರೇ ಬೇರೆ, ಫಾಸ್ಟ್ ಟ್ಯಾಗ್ ರೀಡ್ ಮಾಡುವ ನಂಬರೇ ಬೇರೆಯಾಗಿತ್ತು.

ಈ ನಕಲಿ ನಂಬರ್ ಪ್ಲೇಟನ್ನು ಟೋಲ್ ಗೇಟ್‌ನವರು ಪರಿಶೀಲಿಸುವುದಿಲ್ಲ. ಯಾಕೆಂದರೆ, ಫಾಸ್ಟ್ ಟ್ಯಾಗ್‌ನಿಂದ ಹಣ ಪಾವತಿಯಾಗಿ ಗೇಟ್ ಓಪನ್ ಆಗುತ್ತದೆ, ವಾಹನ ಮುಂದೆ ಹೋಗುತ್ತದೆ. ಆ ಸಂದರ್ಭ ವಾಹನದ ನಂಬರ್ ಹಾಗೂ ಫಾಸ್ಟ್ ಟ್ಯಾಗ್‌ನಲ್ಲಿ ಬಂದ ನಂಬರನ್ನು ಟೋಲ್ ಸಿಬ್ಬಂದಿ ಟ್ಯಾಲಿ ಮಾಡುವುದಿಲ್ಲ. ಅಷ್ಟೊಂದು ಸಮಯಾವಕಾಶವೂ ಅವರಿಗೆ ಇರುವುದಿಲ್ಲ. ಆದರೆ ಪೊಲೀಸರು ಕಳೆದ ಮೂರು ದಿನದ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲಿಸಿದಾಗ ಇದೊಂದೇ ಟೋಲ್‌ಗೇಟ್‌ನಲ್ಲೇ  ಹತ್ತಕ್ಕೂ ಅಧಿಕ ನಕಲಿ ನಂಬರ್ ಪ್ಲೇಟ್ ಇರುವ ವಾಹನಗಳು ಸಂಚರಿಸಿರುವುದು ಪತ್ತೆಯಾಗಿದೆ.

ತನಿಖೆ..:

ಈ ರೀತಿ ನಕಲಿ ನಂಬರ್ ಪ್ಲೇಟ್ ಯಾಕಾಗಿ ಅಳವಡಿಸಿದ್ದಾರೆ ಎಂಬ ಸಂದೇಹ ಇದೀಗ ಬಲವಾಗಿದೆ. ಕೆಲವರು ಎರಡೆರಡು ವಾಹನಗಳಿಗೂ ಒಂದೇ ಫಾಸ್ಟ್ ಟ್ಯಾಗ್ ಬಳಕೆ ಮಾಡುವವರೂ ಇದ್ದಾರೆ. ಆದರೂ ಈ ರೀತಿ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವ ವಾಹನಗಳ ತಪಾಸಣೆ ನಡೆಸಲೂ ಇದೀಗ ಪೊಲೀಸ್ ಇಲಾಖೆ ಮುಂದಾಗಿದೆ.

ಯಾವ ಕಾರಣಕ್ಕಾಗಿ ವಾಹನದಲ್ಲೊಂದು, ಫಾಸ್ಟ್ ಟ್ಯಾಗ್‌ನಲ್ಲೊಂದು ವಾಹನದ ನಂಬರ್ ಅಳವಡಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article