ಮುಡಾ ಹಗರಣ: ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ: ಇನ್ನಾದರೂ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ

ಮುಡಾ ಹಗರಣ: ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ: ಇನ್ನಾದರೂ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ

ಮಂಗಳೂರು: ಮೈಸೂರಿನ ಮುಡಾದಲ್ಲಿ ನಡೆದ ಅಕ್ರಮಗಳ  ಆಳ-ಅಗಲ ಒಂದೊಂದಾಗಿಯೇ ಬಯಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುವ ಮೊದಲು ಸಿಎಂ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಆ ಹುದ್ದೆಯ ಘನತೆ ಕಾಪಾಡಬೇಕೆಂದು ದಕ್ಷಿಣ ಕನ್ನಡ  ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಂಸದರು, ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಇಡಿ ತನಿಖೆಯಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಅಂದಾಜು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಆ ಮೂಲಕ ಮುಡಾದಲ್ಲಿ ಸಿದ್ದರಾಮಯ್ಯನವರು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವುದು ಮತ್ತೊಮ್ಮೆ ಸಾಬೀತಾಗಿದ್ದು, ಮೂಡಾ ಹಗರಣದಲ್ಲಿ ತನ್ನ ಪಾತ್ರವೇ ಇಲ್ಲ ಎಂದು ನಾಟಕವಾಡುತ್ತಿದ್ದ ಕಳಂಕರಹಿತ ಸಿದ್ದರಾಮಯ್ಯನವರ ನಿಜವಾದ ಮುಖವಾಡ ಸಂಪೂರ್ಣ ಕಳಚಿ ಬಿದ್ದಿದೆ ಎಂದು ಹೇಳಿದ್ದಾರೆ.

ಮುಡಾ ಹಗರಣದ ವ್ಯೂಹದಿಂದ ಹೊರಬರಲು ಸಿದ್ದರಾಮಯ್ಯನವರಿಗೆ ಆರಂಭಿಕ ಹಂತದಲ್ಲೇ ಮುಕ್ತ ಅವಕಾಶವಿದ್ದರೂ ಎಲ್ಲವನ್ನು ಬದಿಗೊತ್ತಿ ತಾನು ಶುದ್ದಹಸ್ತದ ರಾಜಕಾರಣಿ ಎಂದು ಜನರ ಮುಂದೆ ಪೋಸ್ ನೀಡುತ್ತಾ ಭಂಡತನದಿಂದ ಸಿಎಂ ಸ್ಥಾನದಲ್ಲೇ ಮುಂದುವರಿಯುತ್ತಾ ಬಂದಿದ್ದಾರೆ. ಇನ್ನಾದರೂ ಸಿಎಂ ಕುರ್ಚಿಗೆ ಅಂಟಿಕೊಳ್ಳದೆ ರಾಜೀನಾಮೆ ಕೊಟ್ಟು ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕೆಂದು ಒತ್ತಾಯಿಸಿದ್ದಾರೆ. 

ಮುಡಾ ನಿವೇಶಗಳನ್ನು ಧರ್ಮಪತ್ನಿಗೆ ಅಕ್ರಮವಾಗಿ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿಗಳ ಗೋಲ್ಮಾಲ್ ನಡೆಸುವುದಕ್ಕೆ ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಪ್ರಭಾವ ಬೀರುವ ಜತೆಗೆ ಆಡಳಿತ ಯಂತ್ರವನ್ನೇ ದುರ್ಬಳಕ್ಕೆ ಮಾಡಿಕೊಂಡಿರುವುದು ಇಡಿ ನೀಡಿರುವ ಅಧಿಕೃತ ವಿವರಣೆಯಲ್ಲಿ ಉಲ್ಲೇಖವಾಗಿದೆ. ತಮ್ಮ ವಿರುದ್ಧ ಹೈಕೋರ್ಟ್ ತೀರ್ಪು ಹೊರಬಂದಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಹೈಕೋರ್ಟ್ನಲ್ಲಿ ಸಿಬಿಐ ಕೋರಿಕೆಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯು ನಿರ್ಣಾಯಕ ಹಂತ ತಲುಪಿರುವ ಈ ಸಮಯದಲ್ಲೇ ಹಗರಣದ ನಿಜ ಸ್ವರೂಪವನ್ನು ಇಡಿ ಬಯಲು ಮಾಡಿದೆ. ಸದ್ಯ ಈಗಾಗಲೇ 14 ಅಕ್ರಮ ನಿವೇಶನಗಳನ್ನು ಮುಡಾಗೆ ಬೇಷರತ್ ಹಿಂದಿರುಗಿಸಿರುವ ಸಿದ್ದರಾಮಯ್ಯನವರು ಆ ಮೂಲಕ ತಮ್ಮ ಸ್ವಜನಪಕ್ಷಪಾತ ಹಾಗೂ ಭ್ರಷ್ಟತೆಯನ್ನು ಒಪ್ಪಿಕೊಂಡಿದ್ದರೂ  ಸಿಎಂ ಕುರ್ಚಿ ವ್ಯಾಮೋಹವನ್ನು ಮಾತ್ರ ಬಿಟ್ಟಂತೆ ತೋರುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article