
ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ: ಪ್ರೊ. ಪಿ.ಎ.ಲ್. ಧರ್ಮ
ಮಂಗಳೂರು: ಮಂಗಳೂರು ವಿವಿ ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಕಾರ್ಯಕ್ರಮಗಳಿಗೆ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಮುಂದುವರಿಸಲು ನಿರ್ಧರಿಸಲಾಗಿದೆ. ಇಲ್ಲಿನ ಮಾದರಿಯಲ್ಲೇ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಇದರ ಹೊರತು ಅವರಿಗೆ ಹೆಚ್ಚಿನ ವಿಶೇಷ ಸವಲತ್ತುಗಳು ಇರುವುದಿಲ್ಲ ಎಂದು ಪ್ರೊ. ಪಿ.ಎ.ಲ್. ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಬುಧವಾರ ಕುಲಪತಿ ಡಾ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬೋಧಕರು!
ವಿವಿಯ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧಿಸುತ್ತಿದ್ದಾರೆ. ಕಳೆದ ಎರಡು ಸೆಮಿಸ್ಟರ್‌ಗಳಿಂದ ಈ ವಿನೂತನ ಪ್ರಯತ್ನವನ್ನು ನಡೆಸಲಾಗುತ್ತಿದ್ದು, ಇದು ಯಶಸ್ವಿಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಬೋಧನಾ ವೃತ್ತಿಯಲ್ಲಿ ತೊಡಗಿಸುವ ಆಸಕ್ತಿ ಹೊಂದಿರುವುದರಿಂದ ವಿದ್ಯಾರ್ಜನೆ ಅವಧಿಯಲ್ಲೇ ಬೋಧನೆಗೆ ಅವಕಾಶ ನೀಡಿದರೆ, ಭವಿಷ್ಯದಲ್ಲಿ ಉಪನ್ಯಾಸಕ ವೃತ್ತಿಗೆ ಸೇರಿದಾಗ ಇನ್ನಷ್ಟು ಸುಲಭವಾಗಲು ಸಾಧ್ಯ. ಈ ದಿಶೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಮಾದರಿಯನ್ನು ಇತರೆ ವಿಭಾಗಗಳೂ ಅನುಸರಿಸಿದರೆ ಉತ್ತಮವಾಗುತ್ತದೆ ಎಂದು ಪ್ರೊ. ಪಿ.ಎಲ್. ಧರ್ಮ ಹೇಳಿದರು.