
ಪತ್ರಿಕೋದ್ಯಮ ವಿಭಾಗ ಪುನಶ್ಚೇತನ: ಪ್ರೊ. ಪಿ.ಎಲ್. ಧರ್ಮ
ಮಂಗಳೂರು: ಮಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದ ಹೆಸರನ್ನು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ಎಂದು ಬದಲಾಯಿಸುವ ಮೂಲಕ ಈ ವಿಭಾಗಕ್ಕೆ ಪುನಶ್ಚೇತನ ಕೊಡುವ ಪ್ರಯತ್ನ ನಡೆಸಲಾಗುತ್ತಿದೆ. ಈ ವಿಭಾಗವನ್ನು ಹಿಂದಿನಂತೆ ಸಹಜ ಸ್ಥಿತಿಗೆ ತರಲು ಪಠ್ಯಕ್ರಮಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಪ್ರೊ. ಪಿ.ಎಲ್. ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಬುಧವಾರ ಕುಲಪತಿ ಡಾ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು.
ಸ್ನಾತಕೋತ್ತರ ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ವಿಭಾಗಗಳ ಪಠ್ಯಕ್ರಮಗಳಿಗೆ ಅನುಮೋದನೆ ಪಡೆಯಲಾಯಿತು. ಸಂತ ಆನ್ಸ್ ಸ್ವಾಯತ್ತ ಸಂಸ್ಥೆಯಲ್ಲಿ ಸ್ನಾತಕ ಪದ ವಿಯಲ್ಲಿ ಕೋ-ಎಜುಕೇಶನ್ ಸಿಸ್ಟಮ್ ಅನುಮೋದನೆ ನೀಡಲಾಯಿತು. ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮಗಳಲ್ಲಿ ಉದ್ಯೋಗಾವಕಾಶ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ ವಿಷಯಾಧಾರಿತ ಕೋರ್ಸ್‌ಗಳ ಪಟ್ಟಿಯನ್ನು ಅನುಮೋದಿಸಲಾಯಿತು. ನ್ಯಾಕ್‌ನಿಂದ ನವೀಕರಣಗೊಳಿಸದ ಕಾಲೇಜುಗಳಿಗೆ ಷರತ್ತಿನ ಮೇರೆಗೆ ಸಂಯೋಜನೆ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಮಂಗಳೂರು ವಿವಿಯಲ್ಲಿ ತುಳು ವಿಭಾಗ ಸ್ಥಾಪನೆ ಹಾಗೂ ಹುದ್ದೆಗಳನ್ನು ಸೃಜಿಸುವ ಬಗ್ಗೆ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಯಿತು.
ಆಡಳಿತ ವಿಭಾಗದ ರಿಜಿಸ್ಟ್ರಾರ್ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗದ ಅಧಿಕಾರಿ ಸಂಗಪ್ಪ ಇದ್ದರು.