ಮಂಗಳೂರು ವಿವಿಯಲ್ಲಿ ಕಾಲೇಜುಗಳ ಸಂಖ್ಯೆ ಮತ್ತೆ ಇಳಿಮುಖ: ಪ್ರೊ. ಪಿ.ಎಲ್. ಧರ್ಮ

ಮಂಗಳೂರು ವಿವಿಯಲ್ಲಿ ಕಾಲೇಜುಗಳ ಸಂಖ್ಯೆ ಮತ್ತೆ ಇಳಿಮುಖ: ಪ್ರೊ. ಪಿ.ಎಲ್. ಧರ್ಮ


ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಈ ವರ್ಷವೂ ಕಾಲೇಜುಗಳ ಸಂಖ್ಯೆ ಮತ್ತೆ ಇಳಿಮುಖವಾಗಿದೆ. ಕಳೆದ ವರ್ಷ ಒಟ್ಟು 174 ಕಾಲೇಜುಗಳ ಪೈಕಿ 12 ಕಾಲೇಜುಗಳು ವಿವಿಯ ಸಂಯೋಜನೆಗೆ ಒಳಪಡಲು ಅರ್ಜಿ ಸಲ್ಲಿಸಿರಲಿಲ್ಲ. ಹಾಗಾಗಿ ಈ ಸಂಖ್ಯೆ 162ಕ್ಕೆ ಇಳಿದಿತ್ತು. ಈ ಬಾರಿ ಉಳಿದಿರುವ ಒಟ್ಟು ಕಾಲೇಜುಗಳ ಸಂಖ್ಯೆ 155ಕ್ಕೆ ಇಳಿಕೆಯಾಗಿದೆ.

ಮಂಗಳೂರಿನ ಕೆನರಾ ವಿಕಾಸ್ ಪ್ರಥಮ ದರ್ಜೆ ಕಾಲೇಜು, ಕಾರ್ಮೆಲ್ ಕಾಲೇಜು ಮೊಡಂಕಾಪು, ಮೇಧಾ ಕಾಲೇಜು ಪುತ್ತೂರು, ಗುಣಶ್ರೀ ಪ್ರಥಮ ದರ್ಜೆ ಕಾಲೇಜು  ಸಿದ್ಧಕಟ್ಟೆ ಹಾಗೂ ನಿಧಿ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ ಅಂಡ್ ಮೆನೇಜ್‌ಮೆಂಟ್ ಮಂಗಳೂರು ಈ ಐದು ಕಾಲೇಜುಗಳು ವಿವಿ ಜೊತೆ ಸಂಯೋಜನೆಗೆ ಈ  ಬಾರಿ ಅರ್ಜಿ ಸಲ್ಲಿಸಿಲ್ಲ ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಬುಧವಾರ ಕುಲಪತಿ ಡಾ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ  ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು.

ಹೊಸ ಕೋರ್ಸ್‌ಗೆ ವಿವಿ ಒಪ್ಪಿಗೆ ಬೇಕು:

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಸ್ವಾಯತ್ತ ಕಾಲೇಜುಗಳು ವಿಶ್ವವಿದ್ಯಾಲಯದ ಗಮನಕ್ಕೆ ಬಾರದೆ ಹೊಸ ಕೋರ್ಸ್‌ಗಳನ್ನು ಶುರು  ಮಾಡುವಂತಿಲ್ಲ. ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ) ನಿಯಮ ಪ್ರಕಾರ ಸ್ವಾಯತ್ತ ಕಾಲೇಜುಗಳು ಇದಕ್ಕೆ ಸಂಬಂಧಿತ ಹೊಸ ಕೋರ್ಸ್  ಆರಂಭಿಸಬೇಕಾದರೆ ಬೋರ್ಡ್ ಆಫ್ ಸ್ಟಡೀಸ್, ಆಡಳಿತ ಸಮಿತಿ ಹಾಗೂ ವಿವಿ ಅನುಮೋದನೆ ಪಡೆಯಲೇ ಬೇಕು ಎಂದಿದೆ. ಇದನ್ನು ಮೀರಿ ಹೊಸ ಕೋರ್ಸ್  ಆರಂಭಿಸುವಂತಿಲ್ಲ. ಇದೇ ವೇಳೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಸಿಎ ಎರಡು ಪ್ರತ್ಯೇಕ ಕೋರ್ಸ್‌ಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.

ವಿದ್ಯಾರ್ಥಿಗಳ ಪ್ರವೇಶಾತಿಗೆ ಒತ್ತು:

ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಟಿ) ಜಾರಿಗೊಂಡ ಬಳಿಕ ಬದಲಾದ ಪಠ್ಯಕ್ರಮಕ್ಕೆ ಹೊಂದಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ವಿದ್ಯಾರ್ಥಿಗಳನ್ನು ದಾಖಲಾತಿಗೆ ಸೆಳೆದುಕೊಳ್ಳುವಲ್ಲಿ ಪ್ರತಿ ವಿಭಾಗವೂ ಹೆಚ್ಚಿನ ಶ್ರಮ ವಹಿಸಬೇಕು ಎಂದು ಪ್ರೊ.ಪಿ.ಎಲ್.ಧರ್ಮ ಸೂಚಿಸಿದರು.

ವಿದ್ಯಾರ್ಥಿಗಳ ಕಲಿಕೆಗೆ, ಉದ್ಯೋಗಕ್ಕೆ ನೆರವಾಗುವ ರೀತಿಯ ಪಠ್ಯಕ್ರಮಗಳನ್ನು ರಚಿಸಲಾಗಿದೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ಪ್ರತಿ ವಿಭಾಗಗಳಲ್ಲೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಪಠ್ಯಗಳ ಜೊತೆಗೆ ಪ್ರವೇಶಾತಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಬೇರೆ ವಿಭಾಗಗಳಿಂದ ಇನ್ನೊಂದು ವಿಭಾಗಗಳ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್‌ನ್ನು ಪರಿಚಯಿಸಲು ಬ್ರಿಡ್ಜ್ ಕೋರ್ಸ್ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಇದರಿಂದ ಅಂತಹ ವಿಭಾಗದ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಡೀನ್‌ವೊಬ್ಬರು ಸಲಹೆ ನೀಡಿದರು.

ಆಡಳಿತ ವಿಭಾಗದ ರಿಜಿಸ್ಟ್ರಾರ್ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗದ ಅಧಿಕಾರಿ ಸಂಗಪ್ಪ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article