
ಕರಾವಳಿಯ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ
ಮಂಗಳೂರು: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ವಾಡಿಕೆಯಂತೆ ಕರಾವಳಿಯ ಗ್ರಾಮೀಣ ಭಾಗದಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗಿದೆ.
ಮಂಗಳವಾರ ಸಂಜೆ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಕೆಲವೆಡೆ ಸಂಜೆಯ ವೇಳೆಗೆ ಹಗುರ ಮಳೆಯಾದರೆ ಇನ್ನೂ ಕೆಲವೆಡೆ ರಾತ್ರಿಯ ವೇಳೆಗೆ ಸಾಧಾರಣ ಮಳೆ ಮುಂದುವರಿದಿತ್ತು. ಅನಿರೀಕ್ಷಿತವಾಗಿ ಮಳೆ ಬಂದ ಕಾರಣ ಗ್ರಾಮೀಣ ಬಾಗದ ಮನೆಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದೆ.
ಕರಾವಳಿಯಲ್ಲಿ ಮಳೆ ಸಾಧ್ಯತೆ:
ಬುಧವಾರ ದಕ್ಷಿಣ ಕನ್ನಡ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ಸಂಜೆ ಸುಳ್ಯ, ಸುಬ್ರಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ತುಂತುರು ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿ ಅಲ್ಲಲ್ಲಿ ಮೋಡ ಹಾಗೂ ಸಂಜೆ ಕಾರ್ಕಳ ಸುತ್ತಮುತ್ತ ತುಂತುರು ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಈಗಿನಂತೆ ಜ.15ರಿಂದ 2 ದಿವಸಗಳ ಕಾಲ ಮೋಡದ ವಾತಾವರಣ ಇರಲಿದ್ದು, ನಂತರ ಬಿಸಿಲು ಹಾಗೂ ಒಣ ಹವೆ ಆವರಿಸುವ ಸಾಧ್ಯತೆಗಳಿವೆ.
ಜ.15ರ ನಂತರ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜ.18ರಂದು ದಕ್ಷಿಣ ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆಯಿದೆ. ಇದರ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಮತ್ತೆ ಮೋಡ, ಮಳೆಯ ಸಾಧ್ಯತೆಗಳಿವೆ ಎಂದು ಹಮಾಮಾನ ಇಲಾಖೆ ಮಾಹಿತಿ ನೀಡಿದೆ.