
ಆರ್‌ಜಿಯುಎಚ್‌ಎಸ್ ಪ್ರಾದೇಶಿಕ ಕೇಂದ್ರ ಕಚೇರಿಗೆ ಮುಖ್ಯಮಂತ್ರಿಯಿಂದ ಶಿಲಾನ್ಯಾಸ
ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆ ಸರಕಾರದ ಗುರಿ: ಸಿದ್ದರಾಮಯ್ಯ
ಮಂಗಳೂರು: ಬಡವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವುದು ಸರಕಾರದ ಗುರಿಯಾಗಿದೆ. ಸರಕಾರದ ಎಲ್ಲಾ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕಾಗಿರುವುದು ಅಂತಿಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಮೇರಿಹಿಲ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಕಚೇರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಸರಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ ಮತ್ತು ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸಿಗುವಂತಾಗಬೇಕು. ಶ್ರೀಮಂತರು ಮತ್ತು ನಮ್ಮಂತಹ ರಾಜಕಾರಣಿಗಳೂ ಸರ್ಕಾರಿ ಆಸ್ಪತ್ರೆಗೆ ಬರುವಂತಾಗಬೇಕು ಎನ್ನುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.
ರಾಜೀವ್ ಗಾಂಧಿ ವಿವಿ ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವವಿದ್ಯಾನಿಲಯ ಆಗಿದೆ. 3.5 ಲಕ್ಷ ವೈದ್ಯ ವಿದ್ಯಾರ್ಥಿಗಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿವಿಯು ಆರೋಗ್ಯ ಸೇವೆ ಸರಳವಾಗಿ ಜನರಿಗೆ ಸಿಗುವ ದಿಕ್ಕಿನಲ್ಲಿ ಸಂಶೋಧನೆಗಳನ್ನು ಹೆಚ್ಚೆಚ್ಚು ನಡೆಸಬೇಕು. ದೇಶದ ಅತ್ಯುತ್ತಮ ಆರೋಗ್ಯ ಸೇವೆ ಬಡವರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ತಿಳಿಸಿದರು.
ಈ ಕ್ಷೇತ್ರದ ಡಿಪ್ಲೊಮಾ ಮತ್ತು ಇತರೆ ಕೋರ್ಸ್ ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ವೈದ್ಯ ವಿಜ್ಞಾನ ಪದವೀಧರರೂ ಯುವನಿಧಿಗೆ ಅರ್ಹತೆ ಗಳಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳು ಇತರ ಕ್ಷೇತ್ರಗಳಿಗೆ ವಲಸೆ ಹೋಗದೆ ಆರೋಗ್ಯ ಕ್ಷೇತ್ರದಲ್ಲೇ ತಮ್ಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಉಚಿತ ಸೇವೆ...
ಬಿಪಿಎಲ್ ಕಾರ್ಡ್ ಕಾರ್ಡ್ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಿ ಎನ್ನುವ ಸೂಚನೆಯನ್ನು ವೈದ್ಯಕೀಯ ಕಾಲೇಜುಗಳಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸರಕಾರಿ ವೈದ್ಯಕೀಯ ಕಾಲೇಜು..
"ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ ಗುರಿ. ಮಂಗಳೂರಿನಲ್ಲಿ ಉತ್ತಮ ಆರೋಗ್ಯ ಸೇವೆ ಇದ್ದರೂ ದ.ಕ. ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ. ಈ ದಿಕ್ಕಿನಲ್ಲೂ ಸರಕಾರ ಯೋಚಿಸಿ ಕ್ರಮ ಕೈಗೊಳ್ಳಲಿದೆ ಎಂದರು.
ಸ್ವಾಗತಿಸಿ ಮಾತನಾಡಿದ ಆರ್‌ಜಿಯುಎಚ್‌ಎಸ್‌ನ ಕುಲಪತಿ ಡಾ.ಎಂ.ಕೆ.ರಮೇಶ್, ಈ ಪ್ರಾದೇಶಿಕ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ವಿನೂತನ ಸಿಮ್ಯುಲೇಶನ್ ಲ್ಯಾಬ್, ಕ್ರೀಡಾ ಸಂಕೀರ್ಣ, ಸುಧಾರಿತ ಫಿಟ್‌ನೆಸ್ ಕೇಂದ್ರ, ಮನೋರಂಜನಾ ಸೌಲಭ್ಯ, ಹವಾನಿಯಂತ್ರಿತ ಸಭಾಂಗಣ, ಸುಧಾರಿತ ಸಂಶೋಧನಾ ಕೇಂದ್ರಗಳು, ಸೆಮಿನಾರ್ ಹಾಲ್ ನೊಂದಿಗೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಇಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ಕೇಂದ್ರದ ಪ್ರಾದೇಶಿಕ ಕೇಂದ್ರ ಆರಂಭಿಸಬೇಕೆನ್ನುವುದು ನನ್ನ ಬಹು ದಿನದ ಕನಸು, ಈ ದೇಶದ ಯುವ ಜನರು ಈ ದೇಶದ ಸಂಪ ತ್ತಾಗಬೇಕೆನ್ನುವುದು ನಮ್ಮ ಆಶಯ. ಈ ಕೇಂದ್ರ ರಾಜೀವ ಗಾಂಧಿ ಆರೋಗ್ಯ ವಿ.ವಿ.ಯ ಕೇಂದ್ರ ಮಾತ್ರವಲ್ಲ, ಕರಾವಳಿ ಜನತೆಯ ಹೆಮ್ಮೆಯ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಆರ್‌ಜಿಯುಎಚ್‌ಎಸ್‌ನ ಸಹ ಕುಲಪತಿ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಧಿಕಾರ ವಿಕೇಂದ್ರೀಕರಣ ಮತ್ತು ಗುಣಮಟ್ಟದ ಶಿಕ್ಷಣ, ಕೌಶಲ್ಯ ನೀಡುವ ಗುರಿ ಇದೆ. ದೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಅತ್ಯಂತ ಹೆಚ್ಚು ವೈದ್ಯಕೀಯ ಕಾಲೇಜು ಹೊಂದಿದೆ ಸರಕಾರ ಬಡವರಿಗೆ ಕನಿಷ್ಠ ದರದಲ್ಲಿ ಚಿಕಿತ್ಸೆ ನೀಡುವ ಗುರಿ ಹೊಂದಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿಗೆ ಎರಡು ಲಕ್ಷ ಸದಸ್ಯರು ನೋಂದಣಿಯಾಗಿದ್ದಾರೆ ಅವರ ಕೌಶಲ್ಯ ವೃದ್ಧಿಗೆ ಸಹಾಯವಾಗಲಿದೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಡಾ.ಮಂಜುನಾಥ ಭಂಡಾರಿ, ಗೋವಿಂದರಾಜು, ಮನಪಾ ಮೇಯರ್ ಮನೋಜ್ ಕುಮಾರ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಸರಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ತ್ರಿವೇಣಿ, ಆರ್‌ಜಿಯುಎಚ್ ಎಸ್ ಸೆನೆಟ್ ಸದಸ್ಯರಾದ, ಡಾ.ಶಿವಶರಣ್ ಶೆಟ್ಟಿ, ಪ್ರೊ.ವೈಶಾಲಿ ಶ್ರೀಜಿತ್, ಡಾ.ಸಲೀಮುಲ್ಲಾ, ಡಾ.ಚರಿಶ್ಮಾ ಡಿಸಿಲ್ವ ಡಾ.ಮುಹಮ್ಮದ್ ಸುಹೇಲ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಅಲೈಡ್ ಮತ್ತು ಆರೋಗ್ಯ ರಕ್ಷಣಾ ’ಮಂಡಳಿಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ವಂದಿಸಿದರು.