
ಸಾಲ ತೀರಿಸಲು ಕಳ್ಳತನ: ಬಂಧನ
ಕಡಬ: ಮಾಡಿದ ಸಾಲ ತೀರಿಸಲು ಹಾಡುಹಗಲೇ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಕಳ್ಳನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕರ್ಮಾಯಿ ನಿವಾಸಿ ಸಿನು ಕುರಿಯನ್ ಎಂದು ಗುರುತಿಸಲಾಗಿದೆ. ಕಳ್ಳತನ ನಡೆದ ಐದೇ ದಿನದಲ್ಲಿ ಆರೋಪಿಯ ಬಂಧನವಾಗಿದೆ.
102 ನೆಕ್ಕಿಲಾಡಿ ಗ್ರಾಮದ ನಿವಾಸಿ ಆಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು ರವಿವಾರ ಪತ್ನಿ ಹಾಗೂ ಮಗನೊಂದಿಗೆ ಮನೆಗೆ ಬೀಗ ಹಾಕಿ ಚರ್ಚ್ ಪ್ರಾರ್ಥನೆಗಾಗಿ ತೆರಳಿದ್ದಾಗ ಕಳವು ನಡೆದಿತ್ತು.
ಕಳ್ಳತನ ನಡೆದಿರುವ ಮನೆಯಿಂದ ಕೂಗಳತೆ ದೂರದಲ್ಲಿರುವ ಮನೆಯ ಯುವಕನೇ ಆರೋಪಿ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಹಲವು ಮಹತ್ವದ ಸುಳಿವುಗಳ ಆಧಾರದಲ್ಲಿ ಸಿನು ಕುರಿಯನ್ನನ್ನು ವಶಕ್ಕೆ ಪಡೆದಿದ್ದರು. ಬೈಕ್‌ನಲ್ಲಿ ಬಂದು ಕೊಟ್ಟಿಗೆಯಲ್ಲಿದ್ದ ಪಿಕ್ಕಾಸಿನಿಂದ ಬಾಗಿಲು ಮುರಿದು ಕಳವು ಮಾಡಿರುವುದಾಗಿ ಆತ ಪೊಲೀಸರಲ್ಲಿ ತಿಳಿಸಿದ್ದಾನೆ. ಆರೋಪಿ ಸಾಲದ ಸುಳಿಯಲ್ಲಿ ಸಿಲುಕಿದ್ದೇ ಕಳವಿಗೆ ಕಾರಣ ಎನ್ನಲಾಗಿದೆ. ಈತ ಕಡಬದ ಜವಳಿ ಮಳಿಗೆಯಲ್ಲಿ ಕೆಲಸಮಾಡುತ್ತಿದ್ದ. ಕಳವಾಗಿದ್ದ ಚಿನ್ನವನ್ನು ಹಾಗೂ ಸ್ವಲ್ಪ ಹಣವನ್ನೂ ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.