
ಸೌಹಾರ್ದತೆ, ಸಹೋದರತೆಯ ಸಮಾಜ ನಿರ್ಮಿಸಲು ಪ್ರತಿಯೊಬ್ಬ ಮನೆಯವರಿಗೂ ಜವಾಬ್ದಾರಿ ಇದೆ: ಯು.ಟಿ. ಖಾದರ್
ಮಂಗಳೂರು: ಸೌಹಾರ್ದತೆ, ಸಹೋದರತೆಯ ಸಮಾಜ ನಿರ್ಮಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಅಕಾಡೆಮಿಗಳು ಮಾತ್ರವಲ್ಲ, ಪ್ರತಿಯೊಬ್ಬ ಮನೆಯವರಿಗೂ ಜವಾಬ್ದಾರಿ ಇದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಫರೀದ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ, ದ.ಕ. ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ ‘ಬಹುಸಂಸ್ಕೃತಿ ಉತ್ಸವ’ದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರೀತಿ, ವಿಶ್ವಾಸದ ವಾತಾವರಣ ಈಗ ಕಡಿಮೆಯಾಗಿದೆ. ಎಲ್ಲರನ್ನೂ ಸಂಶಯದಿಂದ ನೋಡುವ ಪ್ರಮೇಯ ಬಂದೊದಗಿದೆ. ಬೇರೆ ಬೇರೆ ಸಂಸ್ಕೃತಿಗಳ ಆಚಾರ, ವಿಚಾರವನ್ನು ತಿಳಿದುಕೊಳ್ಳದೇ ಇರುವುದು ಇದಕ್ಕೆ ಕಾರಣ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯಾ ಅಕಾಡೆಮಿಗಳೇ ಪ್ರತ್ಯೇಕವಾಗಿ ಮಾಡುವ ಬದಲು ಎಲ್ಲರೂ ಒಟ್ಟಾಗಿ ನಡೆಸಿದಾಗ ಮಾತ್ರ ಸಾಂಸ್ಕೃತಿಕ ವೈವಿಧ್ಯತೆ, ವಿನಿಮಯವನ್ನು ಮನಗಾಣಬಹುದು ಎಂದರು.
ಪ್ರತಿಯೊಬ್ಬರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಈ ಮೂಲಕ ಸಂಸ್ಕೃತಿಯ ವರ್ಗಾವಣೆ ನಡೆಯಬೇಕು. ವಿಶ್ವಾಸ ಮತ್ತು ಅಭಿವೃದ್ಧಿ ಸಮಾಜದಿಂದ ಬಲಿಷ್ಠ ಭಾರತ ನಿರ್ಮಾಣವಾಗಬೇಕು. ಅದಕ್ಕೆ ಬಹುಸಂಸ್ಕೃತಿಯ ಉತ್ಸವ ನಾಂದಿ ಹಾಡಬೇಕು ಎಂದರು.
ಬೇರೆ ಬೇರೆ ದೇಶಗಳಲ್ಲಿ ವರ್ಷದಲ್ಲಿ ಒಂದೆರಡು ಹಬ್ಬ ಇದ್ದರೆ, ಭಾರತದಲ್ಲಿ ಪ್ರತಿದಿನವೂ ಹಬ್ಬವೇ. ಉತ್ಸವಗಳು ನಮ್ಮ ವ್ಯಕ್ತಿತ್ವ ಬೆಳೆಸಲು ಸಾಕಷ್ಟು ಸಹಕಾರಿಯಾಗುತ್ತವೆ. ಕಲೆ, ಸಂಸ್ಕೃತಿನ್ನು ಉತ್ಸವಕ್ಕಷ್ಟೇ ಸೀಮಿತಗೊಳಿಸದೆ ಯುವಕರಿಗೆ ಅದನ್ನು ಹಿರಿಯರು ಅರ್ಥೈಸಬೇಕು. ಇಂತಹ ಉತ್ಸವಗಳಲ್ಲಿ ಪೋಷಕರೂ ಪಾಲ್ಗೊಳ್ಳಬೇಕು ಎಂದು ಅವರು ಆಶಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಮಹೇಶ್ ನಾಚಯ್ಯ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಉಡುಪಿ ಎಸ್ಪಿ ಡಾ.ಅರುಣ್ ಮತ್ತಿತರರಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನಿರೂಪಿಸಿದರು. ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.