
ಲಂಚ ಸ್ವೀಕಾರ: ಜಾಮೀನು ಅರ್ಜಿ ವಜಾ
ಮಂಗಳೂರು: ಡಿ.19 ರಂದು ಮುಲ್ಕಿಯ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಪಿರ್ಯಾದುದಾರರಿಂದ ರೂ.4_00,000 ಲಂಚದ ಹಣವನ್ನು ಸ್ವೀಕರಿಸುವಾಗ ದಸ್ತಗಿರಿ ಮಾಡಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಜಿ.ಎಸ್ ದಿನೇಶ್ ನ್ಯಾಯಾಂಗ ಬಂಧನದಲ್ಲಿದ್ದು, ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಜ.8 ರಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ವಿಚಾರಣೆ ನಡೆಸಿ, ಆರೋಪಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ರವೀಂದ್ರ ಮುನ್ನಿಪ್ಪಾಡಿ ವಾದಿಸಿರುತ್ತಾರೆ. ಆರೋಪಿತ ಅಧಿಕಾರಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ ಎಂಬುದಾಗಿ ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರಾದ ನಟರಾಜ ಎಂ.ಎ ರವರು ತಿಳಿಸಿರುತ್ತಾರೆ.
ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿಲೇವಾರಿಯಾಗದ ಫಿರ್ಯಾದಿದಾರರ ಕಡತವು ಲೋಕಾಯುಕ್ತ ಟ್ರ್ಯಾಪ್ ಕೇಸ್ ನಂತರ ಕೇವಲ 210 ರೂಪಾಯಿ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಪಡೆದು ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳ ಸೇರ್ಪಡೆಯಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರು ಮಂಗಳೂರು ಲೋಕಾಯುಕ್ತ ಕಚೇರಿಗೆ ತಿಳಿಸಿ ಅಧಿಕಾರಿ/ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.