ಸ್ಮಾರ್ಟ್ ಸಿಟಿಯಲ್ಲಿ ಕಾಡುತ್ತಿರುವ ಒಳ ಚರಂಡಿ ಸಮಸ್ಯೆ: ದೂರು ವ್ಯಾಪಕ

ಸ್ಮಾರ್ಟ್ ಸಿಟಿಯಲ್ಲಿ ಕಾಡುತ್ತಿರುವ ಒಳ ಚರಂಡಿ ಸಮಸ್ಯೆ: ದೂರು ವ್ಯಾಪಕ


ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಡ್ರೈನೇಜ್ ಸಮಸ್ಯೆ ಜನಸಾಮಾನ್ಯರನ್ನು ತೀವ್ರವಾಗಿ ಕಾಡುತ್ತಿದ್ದು, ಮೇಯರ್ ಫೋನ್ ಇನ್ನಲ್ಲಿಯೂ ಸಾರ್ವಜನಿಕರಿಂದ ಹಲವು ದೂರುಗಳು ಸಲ್ಲಿಕೆಯಾಗಿವೆ.

ಮೇಯರ್ ಕೊಠಡಿಯಲ್ಲಿ ಶುಕ್ರವಾರ ಆಯೋಜಿಸಲಾದ ಫೋನ್ ಇನ್‌ನಲ್ಲಿ ಗಣೇಶ್ ಭಟ್ ಎಂಬವರು ಕರೆ ಮಾಡಿ, ಪಡೀಲ್ ಕರ್ಮಾರ್ನಲ್ಲಿ ತೋಡಿಗೆ ಕೊಳಚೆ ನೀರು ಹರಿಯುತ್ತಿರುವುದಾಗಿ ದೂರಿದರು. ವೆಲೆನ್ಸಿಯಾದ ನಿರ್ಮಲಾ ಎಂಬವರು ಕರೆ ಮಾಡಿ ತಮ್ಮ ಮನೆ ಬಳಿ ಸುಮಾರು 25ರಿಂದ 30 ಮನೆಗಳಿಗೆ ಡ್ರೈನೇಜ್ ವ್ಯವಸ್ಥೆಯೇ ಇಲ್ಲ ಎಂದರು. ಹೊಸಬೆಟ್ಟು ಹೊನ್ನಕಟ್ಟೆಯ ಜನಾರ್ದನ ಎಂಬವರು ಡ್ರೈನೇಜ್ ವ್ಯವಸ್ಥೆಗಾಗಿ ಮೇಯರ್ರನ್ನು ಒತ್ತಾಯಿಸಿದರು. ವಾಲ್ಟರ್ ಡಿಸೋಜಾ ಎಂಬವರು ಜಪ್ಪಿನಮೊಗರು ಆದಿಮಾಯೆ ದೇವಸ್ಥಾನದ ಬಳಿಕ ಡ್ರೈನೇಜ್ ವ್ಯವಸ್ಥೆಯೇ ಇಲ್ಲ ಎಂದು ಹೇಳಿದರು. 

ರಾಣಿ ಎಂಬವರು ಕರೆ ಮಾಡಿ ಬೊಂದೇಲ್ ಬಳಿ ತಮ್ಮ ಮನೆಯ ಬಳಿಯ ಮನೆಯಲ್ಲಿ ಹೋಂ ಸ್ಟೇಯನ್ನು ಸ್ಥಳೀಯರ ಒಪ್ಪಿಗೆ ಇಲ್ಲದೆ ನಡೆಸಲಾಗುತ್ತಿದೆ. ಪರವಾನಿಗೆಯೂ ಇಲ್ಲವಾಗಿದ್ದು, ಮತ್ತೊಂದು ಹೋಂ ಸ್ಟೇಗೂ ತಯಾರಿ ನಡೆದಿದೆ ಎಂದು ದೂರಿದರು.

ಪ್ರದೀಪ್ ಕದ್ರಿ ಎಂಬವರು ಕರೆ ಮಾಡಿ, ನಗರದಲ್ಲಿ ಸದ್ಯ ಒಂದು ವಧಾಗೃಹ ಇದ್ದರೂ ಸಾಕಷ್ಟು ಹೊಟೇಲ್, ಮಾರುಕಟ್ಟೆ ಗಳಲ್ಲಿ ಬೀಫ್ ಹೇಗೆ ಸಿಗುತ್ತಿದೆ. ಅಕ್ರಮ ವಧಾಗ್ರಹಗಳ ಬಗ್ಗೆ ಮಾಹಿತಿ ನೀಡಿ ಎಂದು ಮೇಯರ್‌ಗೆ ಒತ್ತಾಯಿಸಿದರು.

ಕುದ್ರೋಳಿಯಲ್ಲಿದ್ದ ವಧಾಗೃಹ ಮುಚ್ಚಲಾಗಿದೆ. ಅಕ್ರಮ ಮಾರಾಟ, ಸಾಗಾಟದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಎಂದು ಮೇಯರ್ ತಿಳಿಸಿದಾಗ, ಬೀಫ್ ಸ್ಟಾಲ್ಗಳನ್ನು ಮುಚ್ಚುವ ಕೆಲಸ ಆಗಬೇಕು ಎಂದು ಪ್ರದೀಪ್ ಕದ್ರಿ ಹೇಳಿದರು. 

ಕಂಕನಾಡಿ ಜಂಕ್ಷನ್‌ನ  ರಿಕ್ಷಾ ಪಾರ್ಕಿಂಗ್ ಬಳಿ ಕಾಮಗಾರಿಗಾಗಿ ರಸ್ತೆ ಅಗೆದು 2 ತಿಂಗಳಾದರೂ ಮುಚ್ಚಲಾಗಿಲ್ಲ ಎಂದು ಅಶೋಕ್ ಕಂಕನಾಡಿ ದೂರಿದರು. ಅತ್ತಾವರದ ನಂದಿಗುಡ್ಡೆ ರಸ್ತೆಯಲ್ಲಿ ಸಾರ್ವಜನಿಕರು ಕಸದ ರಾಶಿ ಹಾಕುತ್ತಿದ್ದು ಬ್ಲಾಕ್ ಸ್ಪಾಟ್ ಆಗಿದೆ ಎಂದು ದೂರಿದರು.

ಬೀದಿ ನಾಯಿಗಳಿಗೆ ಅನ್ನ ಹಾಕುವುದು ತಪ್ಪೇ..:

ಮನೆ ಸಮೀಪ ಬೀದಿ ನಾಯಿಗಳಿಗೆ ಅನ್ನ ಹಾಕಿದರೆ ಸ್ಥಳೀಯರೊಬ್ಬರು ಆಕ್ಷೇಪಿಸುತ್ತಾರೆ. ಕೈಯ್ಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಾರೆ. ಅವುಗಳಿಗೆ ಬದುಕಲು ಹಕ್ಕಿಲ್ಲವೇ ಎಂದು ದೇವಿಕಾ ಬೊಂದೇಲ್ ಮೇಯರ್ಗೆ ಕರೆ ಮಾಡಿ ಪ್ರಶ್ನಿಸಿದರು. 

ನಮಗೆ ದಾರಿ ಮಾಡಿಕೊಡಿ..:

ಉಳ್ಳಾಲ ಹೊಯ್ಗೆ ಬಳಿ ನೇತ್ರಾವತಿ ಸೇತುವೆಯಿಂದ ಕಿರಿದಾದ ಸೇತುವೆ ಬಿದ್ದು ಹಲವು ಸಮಯವಾಗಿದೆ. ನಡೆದಾಡುವ ದಾರಿಗೆ 70 ರೂ. ರಿಕ್ಷಾಗೆ ನೀಡಿ ಕಿ.ಮೀ. ದೂರ ಪ್ರಯಾಣಿಸಬೇಕಾಗಿದೆ. 250 ರೂ. 300 ರೂ. ಕೂಲಿ ಕೆಲಸಕ್ಕೆ ಹೋಗುವ ನಾವು ಈ ರೀತಿ ರಿಕ್ಷಾಕ್ಕೆ ಹಣ ಕೊಟ್ಟು ಸಾಗಲು ಸಾಧ್ಯವಿಲ್ಲ. ನಾವು ಊಟದ ವ್ಯವಸ್ಥೆ ಕೇಳುತ್ತಿಲ್ಲ. ನಮಗೆ ದಾರಿ ಮಾಡಿಕೊಡಿ ಎಂದು ಡಾಲ್ಪಿ ಎಂಬವರು ಕರೆ ಮಾಡಿ ಆಗ್ರಹಿಸಿದರು. 

ಮೇಯರ್ ಪ್ರತಿಕ್ರಿಯಿಸಿ ಇಲ್ಲಿ ಕಿರು ಸೇತುವೆಗಾಗಿ ಈಗಾಗಲೇ 2 ಕೋಟಿರೂ. ಮೊತ್ತವನ್ನು ಕಾದಿರಿಸಲಾಗಿದ್ದು, ಸ್ಥಳೀಯರೊಬ್ಬರು ಎನ್ಜಿಟಿಗೆ ದೂರು ನೀಡಿರುವ ಕಾರಣ ವಿಳಂಬವಾಗಿದೆ ಎಂದರು. ಅವರು ಎನ್‌ಜಿಟಿಗೆ ಹೋಗಿರುವುದು ಮರ ಕಡಿದ ಕಾರಣ. ನಾವು ಕೇಳುತ್ತಿರುವುದು ರಸ್ತೆ ಎಂದು ಡಾಲ್ಫಿ ಹೇಳಿದರು.

ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮಂಗಳ, ಮನಪಾ ಸದಸ್ಯ ನವೀನ್ ಡಿಸೋಜಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article