
ಮಸಾಜ್ ಪಾರ್ಲರ್, ಯೂನಿಸೆಕ್ಸ್ ಸೆಲೂನ್-ಮುಂದಿನ ವಾರದಿಂದದ ಕಾರ್ಯಾಚರಣೆ: ಮನೋಜ್ ಕುಮಾರ್
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮಸಾಜ್ ಪಾರ್ಲರ್, ಯೂನಿಸೆಕ್ಸ್ ಸೆಲೂನ್ ಇತ್ಯಾದಿಗಳು ಪರವಾನಿಗೆ ಹಾಗೂ ಅನುಮತಿ ಕಾರ್ಯವ್ಯಾಪ್ತಿ ಮೀರಿ ಕಾರ್ಯಾಚರಿಸುವ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದ ಯುನಿಸೆಕ್ಸ್ ಸೆಲೂನ್ ಒಂದರಲ್ಲಿ ರಾಮಸೇನೆಯಿಂದ ನಡೆದ ದಾಂಧಲೆ ಪ್ರಕರಣದ ಕುರಿತಂತೆ ಸುದ್ದಿಗಾರ ಪ್ರಶ್ನೆಗೆ ಅವರು ಈಪ್ರತಿಕ್ರಿಯೆ ನೀಡಿದರು.
ಮಸಾಜ್ ಪಾರ್ಲರ್ಗಳಲ್ಲಿ ಅನೈತಿಕ ಚಟುವಟಿಕೆ ನಡೆದರೆ ಅದರ ಮೇಲ್ವಿಚಾರಣೆಯನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಆದರೆ ಮಹಾನಗರ ಪಾಲಿಕೆ ನೀಡಿದ ಲೈಸನ್ಸ್ ಮೀರಿ ಬೇರೆ ಚಟುವಟಿಕೆ ನಡೆಸುತ್ತಿದ್ದರೆ ಅಥವಾ ಲೈಸನ್ಸ್ನನ್ನು ಯಾವ ರೀತಿಯಿಂದಲಾದರೂ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರತಿ ಸೆಂಟರ್ಗೂ ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಹೇಳಿದರು.
ಎಂಆರ್ ಪಿಎಲ್‌ಗೆ ಎಸ್ ಟಿ ಪಿ ನಿರ್ವಹಣೆ...:
ನಗರದಲ್ಲಿರುವ ನಾಲ್ಕು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ)ಗಳಲ್ಲಿ ಕಾವೂರು ಹೊರತುಪಡಿಸಿ ಉಳಿದವನ್ನು ಗುತ್ತಿಗೆಯಡಿ ನಿರ್ವಹಿಸಲಾಗುತ್ತಿದೆ. ಅವುಗಳ ನಿರ್ವಹಣೆಯನ್ನು ಎಂಆರ್ ಪಿಎಲ್ ಸಂಸ್ಥೆಗೆ ವಹಿಸಿ, ಅದರಿಂದ ಶುದ್ಧೀಕರಣವಾಗುವ ನೀರನ್ನು ಕಂಪೆನಿಯೇ ಉಪಯೋಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆ ಎಂದು ಮೇಯರ್ ತಿಳಿಸಿದರು.
ಕಾವೂರು ಎಸ್‌ಟಿಪಿ ಹೊರತುಪಡಿಸಿ ಉಳಿದ ಮೂರು ಎಸ್‌ಟಿಪಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ನದಿಗೆ ತ್ಯಾಜ್ಯ ನೀರು ಸೇರುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಮೇಯರ್, ನಗರದಲ್ಲಿರುವ ಎಲ್ಲ ಎಸ್ಟಿಪಿಗಳು ಇರೋದು ನೀರು ಪೂರೈಸುವ ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ ಮಾತ್ರ. ಯಾವ ರೀತಿಯಿಂದಲೂ ಕುಡಿಯುವ ನೀರಿಗೆ ಎಸ್ಟಿಪಿ ತ್ಯಾಜ್ಯ ಸೇರುವ ಪ್ರಶ್ನೆ ಇಲ್ಲ. ವಿಪಕ್ಷದವರು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಪಚ್ಚನಾಡಿ ಎಸ್ ಟಿಪಿಯ 2 ಪಂಪ್ ಹಾಳಾಗಿ ಅಲ್ಲಿಂದ ನೀರು ಒಂದು ದಿನ ಕಾಲುವೆಗೆ ಹರಿದಿತ್ತು, ತಕ್ಷಣ ನಾನು ಭೇಟಿ ನೀಡಿ ಪಂಪ್ ರಿಪೇರಿ ಮಾಡಿಸಿ ಈಗ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದವರು ಹೇಳಿದರು.
ಗುತ್ತಿಗೆದಾರರಿಗೆ ಕೋಟಿಗಟ್ಟಲೆ ಹಣವನ್ನು ನಿರ್ವಹಣೆಗೆ ನೀಡಲಾಗುತ್ತಿದ್ದರೂ ಎಸ್ಟಿಪಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕುರಿತು ಪಾಲಿಕೆಯಿಂದ ಶಿಸ್ತು ಕ್ರಮ ವಹಿಸಲಾಗಿದೆಯೇ ಎಂಬ ಪ್ರಶ್ನೆಗೆ ಈಗಾಗಲೇ ಈ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಕಪ್ಪು ಪಟ್ಟಿಗೆ ಸೇರಿಸಿ ಟೆಂಡರ್ ರದ್ದುಗೊಳಿಸುವ ಎಚ್ಚರಿಕೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್:
ನಗರದ ಸ್ಟೇಟ್ ಬ್ಯಾಂಕ್ ಬಳಿ ಬೀದಿ ಬದಿ ವ್ಯಾಪಾರ ವಲಯದಲ್ಲಿ ಶೇ.10ರಷ್ಟು ವ್ಯಾಪಾರಿಗಳು ಮಾತ್ರ ಸ್ಥಳಾಂತರಗೊಂಡಿದ್ದು, ಉಳಿದವರು ಇನ್ನೂ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಸ್ಥಳಾಂತರ ಆಗಲು ಒಂದು ವಾರ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದೆ. ಸ್ಥಳಾಂತರ ಆಗದಿದ್ದರೆ ಅವರ ಗುರುತಿನ ಚೀಟಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಮೇಯರ್ ಮನೋಜ್ ಕುಮಾರ್, 114 ಮಂದಿಗೆ ಬೀದಿ ಬದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಗುರುತಿನ ಚೀಟಿ ನೀಡಲಾಗಿತ್ತು ಎಂದರು.