
ಕೆಂಜಾರ್ ಕಾಲೇಜ್ ಕೊಳಚೆ ನೀರಿನಿಂದ ರೋಗ ಭೀತಿ..
Tuesday, January 7, 2025
ಮಂಗಳೂರು: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರ್ ಪ್ರದೇಶದ ಶ್ರೀದೇವಿ ಕಾಲೇಜು ಹಾಸ್ಟೆಲ್‌ನ ಕೊಳಚೆ ನೀರನ್ನು ಪೈಪ್ ಮೂಲಕ ಸುಂದರಿ ಶೆಡ್ತಿ ಎಂಬವರಿಗೆ ಸೇರಿದ ಜಾಗಕ್ಕೆ ಬಿಡುತ್ತಿರುವ ಬಗ್ಗೆ ದೂರು ನೀಡಿದ್ದು ಪಂಚಾಯತ್ ನೋಟಿಸ್ ನೋಡಿದರೂ ಸಂಬಂಧಪಟ್ಟ ಕಾಲೇಜ್ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಟ್ಟಡದ ಕೊಳಚೆ ನೀರನ್ನು ಬೇರೆಯವರ ಜಾಗಕ್ಕೆ ಬಿಡಲು ಅವಕಾಶ ಇರುವುದಿಲ್ಲ. ಹೀಗಾಗಿ ಪಂಚಾಯತ್ ಗೆ ನೀಡಿರುವ ದೂರಿನ ಆಧಾರದಲ್ಲಿ ಸಂಸ್ಥೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಸೂಕ್ತ ಕ್ರಮ ಜರುಗಿಸದೆ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಕೊಳಚೆ ನೀರು ಹರಿಯುವುದನ್ನು ತಡೆಯಲು ಇಂಗು ಗುಂಡಿ ಅಥವಾ ಎಸ್ ಟಿಪಿ, ಟ್ರೀಟ್ ಮೆಂಟ್ ಪ್ಲಾಂಟ್ ಅನ್ನು ಅಳವಡಿಸುವಂತೆ ಪಂಚಾಯತ್ ಅಧಿಕಾರಿಗಳು ಹೇಳಿದ್ದರೂ ಕಾಲೇಜ್ ಆಡಳಿತ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ದೂರಿದ್ದಾರೆ.
ಕೊಳಚೆ ನೀರು ತೆರೆದ ಪ್ರದೇಶದಲ್ಲಿ ಹರಿಯುತ್ತಿದ್ದು ಪರಿಸರದಲ್ಲಿ ಮೂಗು ಮುಚ್ಚಿಕೊಂಡು ವಾಸ ಮಾಡುವ ಪರಿಸ್ಥಿತಿ ಬಂದೊದಗಿದೆ. ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ರೋಗ ಹರಡುವ ಭೀತಿ ಎದುರಾಗಿದೆ. ಕೂಡಲೇ ಕಾಲೇಜ್ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾದೀತು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.