
ಮಂಗಳೂರು ವಿ.ವಿ.ಯಲ್ಲಿ ಎಸ್‌ಸಿ-ಎಸ್‌ಟಿ ಸಮೂದಾಯಕ್ಕೆ ಆನ್ಯಾಯ: ಸರಿಪಡಿಸಲು ದಲಿತ ಸಂಘರ್ಷ ಸಮಿತಿ ಆಗ್ರಹ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ನಡೆದಿರುವ ಅಕ್ರಮಗಳ ತನಿಖೆ ನಡೆಸಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು, ಇಲ್ಲವಾದಲ್ಲಿ ಆಡಳಿತ ಸೌಧಕ್ಕೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ವಿಶ್ವನಾಥ ಬೆಳ್ಳಂಪಳ್ಳಿ ಹೇಳಿದರು.
ಈ ಹಿಂದೆ ವಿವಿಯಲ್ಲಿ ಆಡಳಿತ ನಡೆಸಿದ್ದ ಕುಲಪತಿಯೊಬ್ಬರು ನಿಯಮ ಮೀರಿ, ಸ್ವಜಾತಿ ಬಂಧುವೊಬ್ಬರಿಗೆ ಭಡ್ತಿ ಆದೇಶ ಮಾಡಿದ್ದಾರೆ. ನಂತರ ಈ ಅಕ್ರಮ ಭಡ್ತಿ ಸಕ್ರಮಗೊಳಿಸಲು, ಸಾಮಾನ್ಯ ವರ್ಗದ ಶಿಫ್ಟ್ ಮೆಕ್ಯಾನಿಕ್ ಹುದ್ದೆಯನ್ನು ಬ್ಯಾಕ್‌ಲಾಗ್‌ಗೆ ಪರಿವರ್ತಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸ್ತುತ ಆಡಳಿತವು ಇದನ್ನು ಅಧಿಕೃತಗೊಳಿಸಲು ಹೊರಟಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಪಾದಿಸಿದರು.
ವಿವಿಧ ಕೆಲಸ ನಿರ್ವಹಣೆಗೆ ನೌಕರರನ್ನು ನಿಯೋಜಿಸಿಕೊಂಡ ವಿಚಾರಕ್ಕೆ ಸಂಬಂಧಿಸಿ, ವಿಶ್ವವಿದ್ಯಾಲಯವು ನೀಡಿರುವ ಮಾಹಿತಿಯಲ್ಲಿ ಗೊಂದಲಗಳಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅಕ್ರಮ ಭಡ್ತಿ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಕುಲಪತಿ ಮೇಲೆ ಸರ್ಕಾರ ಕ್ರಮ ಕೈಗೊಂಡಿದ್ದು, ಆ ಅವಧಿಯಲ್ಲಿ ಕುಲ ಸಚಿವರಾದವರ ಮೇಲೆಯೂ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕನಕಪ್ಪ, ನಾಗೇಶ, ಪ್ರಸಾದ್ ಇದ್ದರು.