
ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲೆ ದಾಳಿ ಮಾಡಿದ ಬೆಕ್ಕು
Wednesday, January 29, 2025
ಮಂಗಳೂರು: ಬಾವಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಮೇಲೆ ಬೆಕ್ಕು ಮಾರಣಾಂತಿಕವಾಗಿ ದಾಳಿ ಮಾಡಿದ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ಇಂದು ನಡೆದಿದೆ.
ಘಟನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಿದ್ದರೂಢ ಮತ್ತು ಮೌನೇಶ್‌ಗೆ ಗಾಯಗಳಾಗಿದೆ. ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು, ಬೆಕ್ಕು ಮೇಲೆ ಬರಲಾರದೆ ಬಾವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಈ ಹಿನ್ನಲೆಯಲೊಲಿ ಮನೆಯವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು, ಇಂದು ಬೆಕ್ಕಿನ ರಕ್ಷಣೆಗೆ ಅಗ್ನಿಶಾಮಕ ದಳ ತಂಡ ಆಗಮಿಸಿತ್ತು, ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಗೊಂಡಿದ್ದು, ಬೆಕ್ಕಿನ ರಕ್ಷಣೆಗೆ ಬಾವಿಗೆ ಇಳಿದ ಅಗ್ನಿಶಾಮಕ ದಳದ ತಂಡದವರ ಮೇಲೆ ಈ ವೇಳೆ ಬೆಕ್ಕು ದಾಳಿ ಮಾಡಿದೆ. ಸರಿ ಸುಮಾರು ಏಳು ನಿಮಿಷಗಳ ಕಾಲ ಸಿಬ್ಬಂದಿಯ ಕೈಯನ್ನ ಬೆಕ್ಕು ಕಚ್ಚಿ ಹಿಡಿದಿದೆ, ಬೆಕ್ಕಿನಿಂದ ಬಿಡಿಸಲಾಗದೆ ಅಗ್ನಿಶಾಮಕದಳದ ಸಿಬ್ಬಂದಿ ಪರದಾಡಬೇಕಾಗಿ ಬಂದಿತ್ತು, ಗಂಭೀರವಾಗಿ ಗಾಯಗೊಂಡಿರುವ ಸಿದ್ದರೂಢ ಮತ್ತು ಮೌನೇಶ್ ಅವರಿಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.