ಸಂತ ಫಿಲೋಮಿನಾ ಕಾಲೇಜಿನಲ್ಲಿ ವೆಬ್ ಟೆಕ್ನಾಲಜಿ ಬಗ್ಗೆ ತಾಂತ್ರಿಕ ಉಪನ್ಯಾಸ
Wednesday, January 29, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗ ಹಾಗೂ ಇನ್ಸ್ಟಿಟ್ಯೂಶನ್ಸ್ ಇನ್ನೊವೇಶನ್ ಕೌನ್ಸಿಲ್‌ಗಳ ಜಂಟಿ ಆಶ್ರಯದಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ “ಎಕ್ಸ್‌ಪ್ಲೋರಿಂಗ್ ಇನ್ನೊವೇಶನ್ಸ್ ಆ್ಯಂಡ್ ಟ್ರೆಂಡ್ಸ್ ಇನ್ ಮೋಡರ್ನ್ ವೆಬ್ ಟೆಕ್ನಾಲಜಿ” ಎಂಬ ವಿಷಯದ ಬಗ್ಗೆ ತಾಂತ್ರಿಕ ಉಪನ್ಯಾಸ ಕಾರ್ಯಗಾರ ನಡೆಯಿತು.
ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, “ತಂತ್ರಜ್ಞಾನದ ಪರಿವರ್ತಕ ಶಕ್ತಿ ಮತ್ತು ಅದು ನಮ್ಮ ದೈನಂದಿನ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಗಣಕವಿಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ನೀವು ಹೊಸ ಹೊಸ ತಂತ್ರಾಂಶಗಳನ್ನು ರೂಪಿಸುವ ಕಲೆಯನ್ನು ತಿಳಿಯಬೇಕಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯಂತಹ ಆವಿಷ್ಕಾರಗಳು ಬಹಳಷ್ಟು ಮಾರ್ಪಾಡುಗಳನ್ನು ತಂದಿವೆ. ತಾಂತ್ರಿಕ ವಿಷಯಗಳ ಕಲಿಯುವಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿರಿ" ಎಂದು ಹೇಳಿದರು.
ಪುತ್ತೂರಿನ “ದ ವೆಬ್ ಪೀಪಲ್” ಸಂಸ್ಥೆಯ ಟೀಮ್ ಲೀಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರ್ಪಿತ್ ರಾಯ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. “ಗಣಕವಿಜ್ಞಾನವು ಒಂದು ವಿಸ್ತಾರವಾದ ಕ್ಷೇತ್ರ. ಇಲ್ಲಿ ಹಲವು ಅವಕಾಶಗಳಿವೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆಮಾಡಿ ಆ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಿದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ” ಎಂದು ಹೇಳಿ ವೆಬ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ, ಈ ಅವಕಾಶಗಳನ್ನು ಗಳಿಸಲು ಸಹಕಾರಿಯಾಗುವ ತಂತ್ರಾಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.
ಎಂಸಿಎ ವಿದ್ಯಾರ್ಥಿನಿ ನಿರೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು, ಪೂಜಾ ಎನ್ ಸ್ವಾಗತಿಸಿದರು, ಶ್ರೇಯಾ ಎಸ್ ಆರ್ ವಂದಿಸಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಡೀನ್ ಹಾಗೂ ಮುಖ್ಯಸ್ಥರಾದ ವಿನಯಚಂದ್ರ ಹಾಗೂ ಐಐಸಿಯ ಸಂಯೋಜಕಿ ಗೀತಾಪೂರ್ಣಿಮಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.