ಬಾಳೆಪುಣಿಗೆ ನುಡಿನಮನ: ಬಡತನದಲ್ಲಿ ನಲುಗುತ್ತಿದ್ದರೂ ಹಣಕ್ಕಾಗಿ ಕೈಚಾಚಿದವರಲ್ಲ

ಬಾಳೆಪುಣಿಗೆ ನುಡಿನಮನ: ಬಡತನದಲ್ಲಿ ನಲುಗುತ್ತಿದ್ದರೂ ಹಣಕ್ಕಾಗಿ ಕೈಚಾಚಿದವರಲ್ಲ


ಮಂಗಳೂರು: ಆಗಲಿದ ಹಿರಿಯ ಪತ್ರಕರ್ತ ದಿ. ಗುರುವಪ್ಪ ಎನ್.ಟಿ. ಬಾಳೆಪುಣಿ ಅವರಿಗೆ ನುಡಿನಮನ ಸಲ್ಲಿಸುವ ಶ್ರದ್ಧಾಂಜಲಿ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಇಂದು ನಡೆಯಿತು.

ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ನಡೆದ ಭಾವಪೂರ್ಣ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಬಾಳೆಪುಣಿಯ ವ್ಯಕ್ತಿತ್ವದ ಒಳನೋಟವನ್ನು ತೆರೆದಿಟ್ಟರು.

ಬಾಳೆಪುಣಿಯವರ ನೆನಪು ಶಾಶ್ವತವಾಗಿ ಉಳಿಯುವ ದಿಶೆಯಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಯಿತು.

ನನ್ನ ಏಳ್ಗೆಯ ಮೂಲ ಬಾಳೆಪುಣಿ..:

ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಕಿತ್ತಳೆ ಮಾರುತ್ತಿದ್ದ ನನ್ನನ್ನು ಮೊದಲ ಬಾರಿಗೆ ಪರಿಚಯಿಸಿದ್ದು, ನಂತರ ಎಲ್ಲರೂ ಪರಿಚಯಿಸುವಂತೆ ಮಾಡಿದ್ದು ಬಾಳೆಪುಣಿ. ಅಂದಿನಿಂದ ಇಲ್ಲಿವರೆಗೆ ನನ್ನ ಎಲ್ಲ ಕಷ್ಟ ಸುಖಗಳಿಗೆ ಬಾಳೆಪುಣಿ ಬೆನ್ನೆಲುಬಾಗಿದ್ದರು. ನನ್ನ ಈಗಿನ ಎಲ್ಲ ಏಳ್ಗೆಗೆ ಮೂಲ ಕಾರಣ ಬಾಳೆಪುಣಿಯವರು ನನ್ನ ಬಗ್ಗೆ ಮೊದಲು ಬರೆದ ಲೇಖಕ. ಅವರು ಬೇಗನೆ ಇತಲೋಕ ತ್ಯಜಿಸಿರುವುದು ತುಂಬಲಾರದ ನಷ್ಟ ಎಂದರು.

ಹೊಸದಿಗಂತ ಪತ್ರಿಕೆ ಸಿಇಒ ಪ್ರಕಾಶ್ ಪಿ.ಎಸ್. ಮಾತನಾಡಿ, ಗುರುವಪ್ಪ ಎನ್.ಟಿ. ಅವರು ಪತ್ರಕರ್ತನಾಗಿ, ಪತ್ರಿಕೋದ್ಯಮಿಯಾಗಿ, ಬಾಳೆಪುಣಿ ನಾಮಧೇಯದಿಂದಲೂ ಸಮಾನವಾಗಿ ಬದುಕಿದವರು. ಹಿರಿಯರೊಂದಿಗೆ ಗೌರವದಿಂದ, ಕಿರಿಯರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ನೇರ, ನಡೆನುಡಿಯ ನಿಷ್ಠುರವಾದಿ ಪತ್ರಕರ್ತರಾಗಿದ್ದರು. ಗ್ರಾಮೀಣ ಬದುಕನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುದ್ದಿಗಳು ಸಾಕಷ್ಟು ಸಮಾಜದಲ್ಲಿ ಇದೆ, ಅದನ್ನು ಹುಡುಕಿ ತರುವ ದೃಷ್ಟಿ ಬೇಕು ಎಂದು ತೋರಿಸಿಕೊಟ್ಟವರು. ಅವರ ಪ್ರೇರಣಾದಾಯಕ ಬದುಕು ಎಲ್ಲರದ್ದಾಗಬೇಕು ಎಂದು ಆಶಿಸಿದರು.

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ನಿಷ್ಠುರವಾದಿಯಾದ ಬಾಳೆಪುಣಿಯವರು, ತನ್ನ ಸಂಸ್ಥೆಯ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ಕೊನೆವರೆಗೂ ಕೆಲಸ ಮಾಡಿದ್ದಾರೆ. ಪ್ರಾಮಾಣಿಕತೆಯಿಂದ ಗೌರವದಿಂದ ದುಡಿದಿದ್ದಾರೆ. ಅವರ ಜೀವನಾದರ್ಶವೇ ಸಮಾಜಕ್ಕೆ ಮಾರ್ಗದರ್ಶನವಾಗಿದೆ ಎಂದರು.

ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಮಾತನಾಡಿ, ಬಾಳೆಪುಣಿಯವರಲ್ಲಿ ವೃತ್ತಿ ಬದ್ಧತೆ ಇತ್ತು, ಸಾಮಾಜಿಕ ಕಳಕಳಿ ಇತ್ತು. ಕಚೇರಿ ಕೆಲಸದ ಜೊತೆ ಜೊತೆಗೆ ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುತ್ತಿದ್ದರು. ಇದನ್ನು ಪ್ರವೃತ್ತಿಯಾಗಿ ಮಾಡಿಕೊಂಡಿದ್ದರು. ಬಡತನದಲ್ಲಿ ನಲುಗುತ್ತಿದ್ದರೂ ಹಣಕ್ಕಾಗಿ ಕೈಚಾಚಿದವರಲ್ಲ, ಪತ್ರಕರ್ತರ ಸಂಘದ ಭದ್ರಬುನಾದಿಗೆ ಬಾಳೆಪುಣಿ ಕೊಡುಗೆ ಅಪಾರ ಎಂದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ವಾರ್ತಾಧಿಕಾರಿ ಖಾದರ್ ಶಾ, ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಪತ್ರಕರ್ತರಾದ ರವಿ ಪೊಸವಣಿಕೆ, ಜಿತೇಂದ್ರ ಕುಂದೇಶ್ವರ, ಭಾಸ್ಕರ ರೈ ಕಟ್ಟ, ಬಾಳೆಪುಣಿಯವರ ಅಣ್ಣನ ಮಗ ಸುಧೀರ್ ಬಾಳೆಪುಣಿ ಮೊದಲಾದವರು ನುಡಿನಮನ ಸಲ್ಲಿಸಿದರು.

ಬಾಳೆಪುಣಿ ಪುತ್ರ ಮನೇಶ ಬಾಳೆಪುಣಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article