ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕ್ರಮಕೈಗೊಳ್ಳುವಂತೆ ಕ್ಯಾಂಪ್ಕೋ ಮನವಿ

ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕ್ರಮಕೈಗೊಳ್ಳುವಂತೆ ಕ್ಯಾಂಪ್ಕೋ ಮನವಿ


ಮಂಗಳೂರು: ಭಾರತಕ್ಕೆ ಹುರಿದ ಅಡಿಕೆಯ ಆಮದಿನಿಂದ ದೇಶೀಯ ಅಡಿಕೆ ಬೆಳೆಗಾರರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕ್ಯಾಂಪ್ಕೋ ತೀವ್ರ ಚಿಂತೆ ವ್ಯಕ್ತಪಡಿಸಿದೆ. ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರಿಗೆ ತಕ್ಷಣದ ಹಸ್ತಕ್ಷೇಪಕ್ಕಾಗಿ ಪತ್ರವೊಂದನ್ನು ಕಳುಹಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುರಿದ ಅಡಿಕೆ ಹೆಚ್‌ಎಸ್‌ಎನ್ ಕೋಡ್ 20081920 ಅಡಿಯಲ್ಲಿ ಮೌಲ್ಯವರ್ಧಿತ ಉತ್ಪನ್ನದ ರೂಪದಲ್ಲಿ ಆಮದು ಮಾಡಲಾಗುತ್ತಿದ್ದು, ಕಸ್ಟಮ್ಸ್ ಡ್ಯೂಟಿ ತಪ್ಪಿಸಲು ತಪ್ಪು ವರ್ಗೀಕರಣದ ಮೂಲಕ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಈ ರೀತಿಯ ಅಕ್ರಮಗಳು ಮಾರುಕಟ್ಟೆಯ ಸಮತೋಲನವನ್ನು ಹಾಳುಮಾಡುವುದಲ್ಲದೇ ಸರಬರಾಜು ಕೊರತೆಯಿದ್ದರೂ ಬೆಲೆ ಏರಿಕೆಗೆ ಅವಕಾಶ ನೀಡದೆ ದೇಶೀಯ ಬೆಳೆಗಾರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಲ್ಲಿ ತಡೆಯಾಗಿದೆ.

ಕ್ಯಾಂಪ್ಕೋ ಮಾಹಿತಿಯ ಪ್ರಕಾರ, ಈ ಆಮದು ಅಡ್ವಾನ್ಸ್ ರೂಲಿಂಗ್ ಲೈಸೆನ್ಸ್‌ಗಳ ಮೂಲಕ ಕೇವಲ ಶೇ.12 ಜಿಎಸ್‌ಟಿ ನಿಗದಿಯಾಗಿದ್ದು, ಈ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ಪನ್ನದ ಗುಣಮಟ್ಟ ಹಾಳಾಗುತ್ತಿದೆ ಮತ್ತು ಖರೀದಿದಾರರಿಂದ ಸಗಟಾಗಿ ತಿರಸ್ಕಾರವಾಗುವ ಸಾಧ್ಯತೆ ಇದೆ.

ಇದಲ್ಲದೇ, ಸ್ಥಳೀಯ ಖರೀದಿದಾರರು ಕೂಡಾ ಈ ಮಿಶ್ರಿತ ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು ಈ ಅಡಿಕೆ ಉತ್ತರ ಭಾರತಕ್ಕೆ ಸಗಟು ಮಾಡಿದ ನಂತರ ತಿರಸ್ಕಾರಗೊಳ್ಳುತ್ತದೆ. ಇದರಿಂದ ಚಾಲಿ ಅಡಿಕೆಯ ಬೆಲೆ ಕುಸಿದು, ಅಡಿಕೆಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿ, ಬೆಳೆಗಾರರ ಆದಾಯಕ್ಕೆ ತೀವ್ರ ಹಾನಿಯುಂಟಾಗುವ ಸಾಧ್ಯತೆಗಳಿವೆ.

ಯಾವುದೇ ರೂಪದ ಅಡಿಕೆಯ ಆಮದಿಗೆ ಕನಿಷ್ಠ ಆಮದು ದರವನ್ನು ನಿಗದಿ ಮಾಡುವುದು., ಹೆಚ್‌ಎಸ್‌ಎನ್ ಕೋಡ್‌ಗಳ ತಪ್ಪು ವರ್ಗೀಕರಣವನ್ನು ತಡೆಯಲು ಎಲ್ಲಾ ರೀತಿಯ ಅಡಿಕೆಗೆ ಏಕ ರೂಪ ಹೆಚ್‌ಎಸ್‌ಎನ್ ಕೋಡ್ ನಿಗದಿ ಪಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು., ದೇಶೀಯ ಬೆಳೆಗಾರರಿಗೆ ನ್ಯಾಯಸಮ್ಮತ ದರ ದೊರಕುವಂತೆ ನೀತಿಗಳನ್ನು ರೂಪಿಸುವುದು., ಕ್ಯಾಂಪ್ಕೋ ಬೆಳೆಗಾರರನ್ನು ಆಮದು ಅಡಿಕೆ ಖರೀದಿ ಮತ್ತು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡದಂತೆ ಮನವಿ ಮಾಡಿದೆ, ಇದು ಕೃಷಿಕ ಸಮುದಾಯದ ಹಿತವನ್ನು ಕಾಪಾಡಲು ಅಗತ್ಯವಾಗಿದೆ. ಕ್ಯಾಂಪ್ಕೋ ಬೆಳೆಗಾರರ ಹಿತ ಕಾಪಾಡಲು ಸದಾ ಬದ್ಧವಾಗಿದೆ ಎಂದು ಮನವಿ ಮಾಡಿದೆ ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article