ನಾಳೆಯಿಂದ ಶ್ರೀ ಕ್ಷೇತ್ರ ಕದ್ರಿಯ ವರ್ಷಾವಧಿ ಜಾತ್ರೆ

ನಾಳೆಯಿಂದ ಶ್ರೀ ಕ್ಷೇತ್ರ ಕದ್ರಿಯ ವರ್ಷಾವಧಿ ಜಾತ್ರೆ

ಮಂಗಳೂರು: ಇತಿಹಾಸ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ನಾಳೆಯಿಂದ ಆರಂಭಗೊಳ್ಳಲಿದೆ.

ಜನವರಿ 24ರ ವರೆಗೆ ನಡೆಯಲಿರುವ ವಾರ್ಷಿಕ ಮಹೋತ್ಸವವು ಜ.13 ರಂದು ರಾತ್ರಿ ಮಹಾಪೂಜೆಯ ಬಳಿಕ ಮುಹೂರ್ತ ಬಲಿ, ದೇವರ ಪ್ರಾರ್ಥನೆಯೊಂದಿಗೆ ತಂತ್ರಿಗಳ ಯಾಗಶಾಲಾ ಪ್ರವೇಶದೊಂದಿಗೆ ಪ್ರಾರಂಭವಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳವಾರ ಮುಂಜಾನೆ 4 ಗಂಟೆಗೆ ತೀರ್ಥ ಸ್ನಾನ ಆರಂಭಗೊಂಡು, ಕದ್ರಿ ಶ್ರೀ ಯೋಗೀಶ್ವರ ಮಠಾಧಿಪತಿ ಶ್ರೀ ರಾಜಾ ನಿರ್ಮಲ್‌ನಾಥಜೀಯವರಿಂದ ತೀರ್ಥ ಸ್ನಾನ ನೆರವೇರುವುದು. ಸಂಜೆ 6 ಗಂಟೆಗೆ ಏಳುಪಟ್ಟಣ ಮೊಗವೀರ ಮಹಾ ಸಭಾದವರಿಂದ ಧ್ವಜಸ್ತಂಭದ ಆರೋಹಣ, ಮಹಾಪೂಜೆ ಬಳಿಕ ಶ್ರೀ ಮಲರಾಯ ದೈವದ ಭಂಡಾರದ ಆಗಮನವಾಗಲಿದೆ.

ರಾತ್ರಿ 10 ಗಂಟೆಗೆ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವಬಲಿ, ಭೂತಬಲಿ, ಕದ್ರಿ ಕೆಳಗಿನ ಮನೆಯವರಿಂದ ಕಂಚುದೀಪ ಬೆಳಗುವುದು, ದೀಪದಬಲಿ ಉತ್ಸವ, ಸಣ್ಣ ರಥೋತ್ಸವ, ತಪ್ಪಂಗಾಯಿ ನಡೆಯಲಿದೆ ಎಂದ ತಿಳಿಸಿದರು.

ಜ.15 ರಂದು ರಾತ್ರಿ ಉತ್ಸವಬಲಿ, ದೀಪದಬಲಿ ಉತ್ಸವ, ಸಣ್ಣ ರಥೋತ್ಸವ ಜರಗಲಿರುವುದು. ಜ.16 ರಂದು ಸಂಜೆ ಬಿಕರ್ನಕಟ್ಟೆ ಸವಾರಿ ಬಲಿ, ಜ.17 ರಂದು ಮಲ್ಲಿಕಟ್ಟೆ ಸವಾರಿ ಬಲಿ, ಜ.18 ರಂದು ಮುಂಡಾಣಕಟ್ಟೆ ಸವಾರಿ ಬಲಿ, ಜ.19 ರಂದು ಕೊಂಚಾಡಿ ಸವಾರಿ ಬಲಿ, ಅಲ್ಲದೆ ಜ.20 ರಂದು ಏಳನೇ ದೀಪೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು, ಜ.21 ರಂದು ಸಂಜೆ ‘ಶ್ರೀ ಮನ್ಮಹಾರಥೋತ್ಸವ’, ಬೆಳ್ಳಿರಥೋತ್ಸವ, ಚಂದ್ರಮಂಡಲ ಉತ್ಸವದ ಬಳಿಕ ಮಹಾಪೂಜೆ, ಭೂತಬಲಿ ಹಾಗೂ ಕವಾಟ ಬಂಧನ ನೆರವೇರುವುದು. 

ಜ.22 ಕವಾಟೋದ್ಘಾಟನೆ, ತುಲಾಭಾರ ಸೇವೆಗಳು ನಡೆಯಲಿದ್ದು, ರಾತ್ರಿ ಚಂದ್ರಮಂಡಲ ಉತ್ಸವ ಬಳಿಕ ಕದ್ರಿ ಹತ್ತು ಸಮಸ್ತರಿಂದ ಧ್ವಜಾವರೋಹಣಗೊಳ್ಳಲಿದೆ. ಜ.24 ರಂದು ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮದೊಂದಿಗೆ ವರ್ಷಾವಧಿ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಎ.ಜೆ. ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರುಗಳಾದ ಮಲ್ಲಿಕಾ ಪಕಳ, ಪುಷ್ಪಲತಾ, ಕದ್ರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ನಿಕಟಪೂರ್ವ ಅಧ್ಯಕ್ಷ ಪ್ರವೀಣ್, ಕ್ಷೇತ್ರದ ಪರ್ಯಾಯ ಅರ್ಚಕ ರಾಘವೇಂದ್ರ ಅಡಿಗ, ಪ್ರಮುಖರಾದ ಎಸ್. ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article