
ರಾಜ್ಯ ಕಾಂಗ್ರೆಸ್ ಸರ್ಕಾರ ಸಮಾಜ ಘಾತುಕರಿಗೆ ಸ್ವರ್ಗವಾಗಿದೆ: ಸತೀಶ್ ಕುಂಪಲ
Friday, January 17, 2025
ಮಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಮಾಜ ಘಾತುಕರಿಗೆ ಪೊಲೀಸ್ ಇಲಾಖೆಯ ಮೇಲೆ ಭಯವೇ ಇಲ್ಲಂದಾಗಿದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಬೀದರ್, ವಿಜಯಪುರದಲ್ಲಿ ದರೋಡೆಕೋರರು ಅಟ್ಟಹಾಸ ಮೆರೆದು ಜನಸಾಮಾನ್ಯರಿಗೆ ಆತಂಕದಿಂದ ಬದುಕುವಂತಾಗಿದೆ. ಇದೀಗ ರಾಜ್ಯದ ಸ್ಪೀಕರ್ ಅವರ ಕ್ಷೇತ್ರ ಉಳ್ಳಾಲದಲ್ಲಿ ಬ್ಯಾಂಕ್ ದರೋಡೆ ಮಾಡಿದ ಘಟನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದರೋಡೆ ಘಟನೆ ನಡೆದಿರುವುದು ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಒಟ್ಟು ಈ ಘಟನೆಯ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸಮಾಜ ಘಾತುಕರಿಗೆ ಸ್ವರ್ಗವಾಗಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.