
ಶಕ್ತಿ ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರಧಾನ ಹಾಗೂ ಬೀಳ್ಕೊಡುಗೆ ಸಮಾರಂಭ
Friday, January 17, 2025
ಮಂಗಳೂರು: ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಗೆ ಬೀಳ್ಕೊಡುಗೆ ಸಮಾರಂಭ ವಿಗ್ಮಾ ೨೦೨೪-೨೫ ವಿಜೃಂಭಣೆಯಿಂದ ಜರಗಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.
ಈ ಸಮಾರಂಭದಲ್ಲಿ ದೀಪವನ್ನು ಬೆಳಗಿಸಿ ನಂತರ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಕ್ ಅವರು, ‘ಗುರುಗಳ ಮೇಲೆ ಇಟ್ಟಿರುವ ನಿಮ್ಮ ಪ್ರೀತಿ ಭಕ್ತಿ ಮೆಚ್ಚುವಂತದ್ದು, ಅದು ಕೇವಲ ಬೀಳ್ಕೊಡುಗೆ ಅಥವಾ ಗುಡ್ ಬೈ ಹೇಳುವುದಲ್ಲ. ಇದು ಮುಂದಿನ ಜೀವನದಲ್ಲಿ ಮತ್ತೊಂದು ಹಂತಕ್ಕೆ ಹೊಸ ಹೆಜ್ಜೆ ಇಡುವುದು ಎಂದರ್ಥ. ನೀವು ಇಲ್ಲಿಂದ ಸಾಕಷ್ಟು ನೆನಪುಗಳನ್ನು ತೆಗೆದುಕೊಂಡು ಬೇರೆ ಬೇರೆ ಕಡೆಗಳಿಗೆ ಹೋದರೂ ನೀವು ಎಂದೆದಿಗೂ ಶಕ್ತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿರುತ್ತೀರಿ. ಮುಂಬರುವ ನಿಮ್ಮ ಬೋರ್ಡ್ ಪರೀಕ್ಷೆಗೆ ಶುಭವಾಗಲಿ ಎಂದು ಹಾರೈಸಿದರು.
ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ‘ಗುರುಗಳು ಯಾವುದೋ ಒಂದು ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಗದರುತ್ತಾರೆ, ಆದನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಏಳಿಗೆಗೆ ಎಂದು ಧನಾತ್ಮಕವಾಗಿ ಸ್ವೀಕರಿಸಬೇಕು. ಈಗಾಗೇ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕಾಗಿ ಮತ್ತು ಶಕ್ತಿ ಪೌಂಢೇಶನ್ ಕೋರ್ಸ್‌ಗಳ ಕುರಿತಾದ ವಾರ್ಷಿಕ ಯೋಜನೆಯುಳ್ಳ ಪುಸ್ತಕವು ಮುದ್ರಣಗೊಂಡು, ಮುಂದಿನ ದಿನಗಳಲ್ಲಿ ಅದು ಜಾರಿಗೆ ಬರುತ್ತದೆ. ವಿದ್ಯಾರ್ಥಿಗಳು ಇದರಿಂದ ಬಹಳಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿ ತಿಳಿಸಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಆದಿತ್, ಯಶ್ವಂತ್, ಆಯಿನ ಹಾಗೂ ನಿಖಲ್ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕಳೆದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜನಾತ್ಮಕ ಆಟಗಳನ್ನು ಆಯೋಜಿಸಲಾಗಿತ್ತು.
ವಿದ್ಯಾಭ್ಯಾಸವನ್ನು ಪಡೆದುಕೊಂಡ ಸಿಹಿ ನೆನಪಿಗಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಕ್ತಿ ವಿದ್ಯಾಸಂಸ್ಥೆಗೆ ಪ್ರೀತಿ ಪೂರ್ವಕವಾಗಿ ಉಡುಗೊರೆಯೊಂದನ್ನು ನೀಡಿದರು.
ಸಮಾರಂಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.
ಶಿಕ್ಷಕಿ ಮಧುರ ಸ್ವಾಗತಿಸಿದರು, ನಯನ ನಿರೂಪಿಸಿ, ಸ್ಮೃತಿ ವಂದಿಸಿದರು.