
ಕರ್ತವ್ಯ ಪಾಲಿಸುವುದೇ ದೇಶಕ್ಕೆ ಮಾಡುವ ಉನ್ನತ ಸೇವೆ: ಪ್ರೊ. ಗಣೇಶ್ ಸಂಜೀವ್
ಮಂಗಳೂರು: ದೇಶದ ಸಂವಿಧಾನ ಪ್ರತಿ ನಾಗರಿಕನಿಗೂ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೀಡಿದೆ. ಹಕ್ಕುಗಳನ್ನು ಚಲಾಯಿಸುವಲ್ಲಿ ಮಾತ್ರವೇ ಮುಂದಾಗುತ್ತಿದ್ದೇವೆ ಹೊರತು ಕರ್ತವ್ಯಗಳ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ಹಾಗಾಗಿ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಪಾಲಿಸಿದರೇ ಅದೇ ನಿಜವಾದ ದೇಶ ಸೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಗಣೇಶ್ ಸಂಜೀವ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಬೇರೆಯವರು ಒಂದಷ್ಟು ಗುಣಗಳನ್ನು ಬದಲಾಯಿಸಿಕೊಳ್ಳಬೇಕೆಂದು ಯಾವಾಗಲೂ ಬಯಸುತ್ತೇವೆ. ಆದರೆ ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮಾಡುವುದೇ ಇಲ್ಲ. ನಾವು ಯಾವಾಗಲೂ ಸರ್ಕಾರ, ವ್ಯವಸ್ಥೆಯ ವೈಫಲ್ಯಗಳ ಕುರಿತೇ ಹೆಚ್ಚು ಮಾತನಾಡುತ್ತಿರುತ್ತೇವೆ. ಆ ನಿಟ್ಟಿನಲ್ಲಿ ಪೂರ್ವಾಗ್ರಹಕ್ಕೆ ಒಳಗಾಗಿದ್ದೇವೆ. ಬದುಕಿನಲ್ಲಿ ನಕಾರಾತ್ಮಕ ಚಿಂತನೆಗಳನ್ನು ಬದಿಗಿರಿಸಿ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ ಎಂದರು.
ಸಮಾಜದಲ್ಲಿ ಉತ್ತಮ ಕೆಲಸಗಳಿಗೆ ಕೈಜೋಡಿಸಿ ದೇಶಕ್ಕೆ ಗೌರವ ಕೊಡುವ ಮನಸ್ಥಿತಿ ಸಂಕುಚಿತಗೊಳ್ಳುತ್ತಿರುವುದು ವಿಪರ್ಯಾಸ. ಇಂದು ದೇಶದಲ್ಲಿ ಉತ್ತಮ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಆ ಕಂದಕವನ್ನು ತುಂಬುವ ಪ್ರಯತ್ನ ನಡೆಸಬೇಕಿದೆ. ಆ ಮೂಲಕ ದೇಶದ ಸಂವಿಧಾನದ ಆಶೋತ್ತರಗಳಿಗೆ ಒತ್ತುಕೊಡುವ ಮೂಲಕ ಹಾಗೂ ನಮ್ಮ ಪಾಲಿನ ಕರ್ತವ್ಯಗಳನ್ನು ಪಾಲಿಸುತ್ತಾ ದೇಶವನ್ನು ಪ್ರೀತಿಸುವ, ಗೌರವಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ದೇಶಕ್ಕೆ ಸಂವಿಧಾನ ಅಳವಡಿಸಿಕೊಂಡು 75 ವರ್ಷ ಪೂರೈಸಿ 76ನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಇಷ್ಟೂ ವರ್ಷಗಳಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇವೆ. ಅದರ ಜೊತೆ ಜೊತೆಗೆ ಉತ್ತಮ ವ್ಯವಸ್ಥೆ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಿದೆ. ಈ ಎಲ್ಲದರ ಹಿಂದೆ ಸಂವಿಧಾನವೇ ಮೂಲ ಅಡಿಪಾಯವಾಗಿದೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಎನ್ಸಿಸಿ ನೌಕಾದಳದ ಮುಖ್ಯಸ್ಥ ಪ್ರೊ. ಯತೀಶ್ ಕುಮಾರ್, ಭೂದಳದ ಮುಖ್ಯಸ್ಥ ಡಾ. ಜಯರಾಜ್ ಎನ್., ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವ ಮೂರ್ತಿ, ಎನ್‌ಎಸ್‌ಎಸ್ ಅಧಿಕಾರಿ ಡಾ. ಗಾಯತ್ರಿ ಎನ್., ಡಾ. ಸುರೇಶ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.