ನಮ್ಮ ದೇಶ ಮತ್ತು ಸಂವಿಧಾನವನ್ನು ಗೌರವಿಸೋಣ: ಶಾಸಕ ಕೋಟ್ಯಾನ್

ನಮ್ಮ ದೇಶ ಮತ್ತು ಸಂವಿಧಾನವನ್ನು ಗೌರವಿಸೋಣ: ಶಾಸಕ ಕೋಟ್ಯಾನ್


ಮೂಡುಬಿದಿರೆ: ದೇಶ ಇಂದು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಬೆಳೆಯುತ್ತಿದೆ. ನಮ್ಮ ದೇಶದ ಸಂವಿಧಾನವು ಅತ್ಯುನ್ನತವಾದುದು ಆದ್ದರಿಂದ ದೇಶ ಮತ್ತು ಸಂವಿಧಾನವನ್ನು ಗೌರವಿಸೋಣ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೂಡುಬಿದಿರೆ ಇದರ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಪಥಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿ ಮಾತನಾಡಿದರು.


ಮೂಡುಬಿದಿರೆಯಲ್ಲಿ 77 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೆ ಶುದ್ಧ ಕುಡಿಯುವ ನೀರು ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ. 4.5ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಬಂಗ್ಲೆಯನ್ನು ಪುನರ್ ನಿರ್ಮಿಸಲಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. 4.5 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಪಂಚಾಯತ್ ಕಚೇರಿಯು ನಿರ್ಮಾಣವಾಗಲಿದೆ. ಬಡವರಿಗೆ ಹಕ್ಕು ಪತ್ರ ನೀಡುವ ಕಾರ್ಯವು ಶೇ.95ರಷ್ಟು ಮುಗಿದಿದೆ. ಮೂಡುಬಿದಿರೆ ತಾಲೂಕನ್ನು ಜಿಲ್ಲೆಯಲ್ಲೇ ಮಾದರಿ ತಾಲೂಕನ್ನಾಗಿ ರೂಪಿಸಲು ಪ್ರಯತ್ನಿಸಲಾಗುವುದು ಎಂದು ಕೋಟ್ಯಾನ್ ಹೇಳಿದರು.


ಧ್ವಜಾರೋಹಣ ನೆರವೇರಿಸಿದ ತಾಲೂಕು ತಹಸೀಲ್ದಾರ್ ಅರವಿಂದ್ ಮಾತನಾಡಿ, ಭಾರತ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿದಾನವನ್ನು ಹೊಂದಿದೆ. ಜಾತ್ಯಾತೀತತೆ, ಸಮಾನತೆ, ಏಕತೆ, ಸಮಗ್ರತೆಯು ಸಂವಿಧಾನದ ಆಶಯವಾಗಿದೆ. ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದರು. 

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ಅಧಿಕ ಅಂಕ ಗಳಿಸಿರುವ ಪ್ರತಿಭೆಯ ವಿಶೇಷ ಚೇತನ ಚಿನ್ಮಯ ಭಟ್ ಅವರನ್ನು ಸನ್ಮಾನಿಸಲಾಯಿತು. 


ವೇದಿಕೆಯಲ್ಲಿ ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ತಾಲೂಕು ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಉಪಸ್ಥಿತರಿದ್ದರು. 

ಉಪತಹಸೀಲ್ದಾರ್ ರಾಮ ಕೆ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಎನ್‌ಎಸ್‌ಎಸ್, ಪೊಲೀಸ್ ತಂಡದಿಂದ ಪೇಟೆಯಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. 


ತಾಲೂಕು ಪಂಚಾಯತ್ ಮೂಡುಬಿದಿರೆ ವತಿಯಿಂದ ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆ (ಪಡುಮಾರ್ನಾಡು ಗ್ರಾಮ ಪಂಚಾಯತ್ ಸಿಬ್ಬಂದಿ ಕಿಶೋರ್ ಪ್ರತಿಮೆಯಂತೆ ಗಮನ ಸೆಳೆದರು), ಪುರಸಭೆಯಿಂದ ಸ್ವಚ್ಚತೆಯ ಅರಿವು ಹಾಗೂ ಸಮುದಾಯ ಆರೋಗ್ಯ ಕೇಂದ್ರದಿಂದ ಸೊಳ್ಳೆಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸ್ಥಬ್ಧ ಚಿತ್ರವು ಮೂಡುಬಿದಿರೆ ಮುಖ್ಯಭಾಗದಲ್ಲಿ ಸಂಚರಿಸಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article