
ಕೋಟೆಕಾರ್ ದರೋಡೆ ಪ್ರಕರಣ: ದೋಚಿದ ಮೊತ್ತದ್ದೇ ಗೊಂದಲ
ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ. ಸಿ. ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಮುರುಗಂಡಿ ತೇವರ್ ಮತ್ತು ಜೋಶುವಾ ರಾಜೇಂದ್ರನ್ ಎಂಬವರನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದು, ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುರುಗಂಡಿ ತೇವರ್ ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಕಾಲಕ್ಕಾಡ್ ನಿವಾಸಿಯಾಗಿದ್ದು, ಜೋಶುವಾ ಅದೇ ಜಿಲ್ಲೆಯ ಕಲ್ಲಿಡೈಕುರುಚ್ಚಿ ನಿವಾಸಿಯಾಗಿದ್ದಾನೆ. ಸ್ಥಳೀಯ ಪೊಲೀಸರ ನೆರವು ಪಡೆದು ಮಂಗಳೂರು ಪೊಲೀಸರು ಬಂಧಿಸಿದ್ದು, ಸ್ಥಳೀಯ ಅಂಬಾಸಮುದ್ರಂ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ, ಎರಡು ಕೇಜಿ ಚಿನ್ನಾಭರಣ ಮತ್ತು ಮೂರು ಲಕ್ಷ ನಗದು, ಒಂದು ರಿವಾಲ್ವರ್, ಮೂರು ಬುಲೆಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾಗಿ ಕೋರ್ಟಿಗೆ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.
ಮಂಗಳವಾರ ಸ್ಥಳೀಯ ಕೋರ್ಟಿಗೆ ಹಾಜರುಪಡಿಸಿ ಮುರುಗನ್ ಮತ್ತು ಜೋಶುವಾನನ್ನು ಮಂಗಳೂರು ಪೊಲೀಸರು ಬಾಡಿ ವಾರೆಂಟ್ ಪಡೆದು ಜೊತೆಗೆ ಕರೆತಂದಿದ್ದಾರೆ. ಇದಕ್ಕೂ ಮೊದಲೇ ಇನ್ನೊಬ್ಬ ಆರೋಪಿ ಕಣ್ಣನ್ ಮಣಿ ಮುಂಬೈನಲ್ಲಿ ಸೆರೆಸಿಕ್ಕಿದ್ದು, ಆತನನ್ನು ಮಂಗಳೂರಿಗೆ ಕರೆತಂದು ಪರಾರಿಯಾಗಲು ಯತ್ನಿಸಿದ್ದಕ್ಕೆ ಗುಂಡಿನ ರುಚಿ ತೋರಿಸಿದ್ದಾರೆ. ಫೈರಿಂಗ್ ಆದ ಸ್ಥಳಕ್ಕೆ ಬಂದಿದ್ದ ಕೋಟೆಕಾರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ, ಬ್ಯಾಂಕಿನಲ್ಲಿ ಕಳವಾದ ಚಿನ್ನಾಭರಣದ ಬಗ್ಗೆ ಲೆಕ್ಕ ಆಗಿದ್ದು ಒಟ್ಟು ೧೫ ಕೋಟಿಗೂ ಹೆಚ್ಚು ಮೊತ್ತದ ಚಿನ್ನ ದರೋಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಎಫ್‌ಐಆರ್ ನಲ್ಲಿ ಅಂದಾಜು ಲೆಕ್ಕ ಕೊಡಲಾಗಿತ್ತು. ಅದನ್ನು ಮತ್ತೆ ಸೇರಿಸಲಾಗುವುದು ಎಂದು ಹೇಳಿದ್ದರು.
ಇದೀಗ ತಮಿಳುನಾಡಿನಲ್ಲಿ ವಶಕ್ಕೆ ಪಡೆದ ಇಬ್ಬರನ್ನು ಕೋರ್ಟಿಗೆ ಹಾಜರುಪಡಿಸಿದ ವೇಳೆ ಎರಡು ಕೇಜಿ ಚಿನ್ನಾಭರಣವೆಂದು ತೋರಿಸಲಾಗಿದೆ. ಮುಂಬೈನಲ್ಲಿ ಬಂಧಿಸಲ್ಪಟ್ಟ ಆರೋಪಿಯ ಬಳಿ ಎಷ್ಟು ಸಿಕ್ಕಿದೆಯೆಂದು ಪೊಲೀಸರು ಮಾಹಿತಿ ನೀಡಿಲ್ಲ. ಪ್ರಕರಣದಲ್ಲಿ ಇನ್ನೂ ಆರು ಮಂದಿ ಪರಾರಿಯಾಗಿದ್ದು, ಅವರು ತಮ್ಮೊಂದಿಗೆ ಚಿನ್ನಾಭರಣ ಇಟ್ಟುಕೊಂಡು ಹೋಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೊನ್ನೆ ಮಂಗಳೂರಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಗೋಣಿ ಚೀಲದಲ್ಲಿ ಒಯ್ದಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದರು.