
ಗೋವುಗಳ ಮೇಲೆ ಸರಣಿ ವಿಕೃತಿ: ಜ.25ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ
ಉಡುಪಿ: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ವಿಕೃತ ಅಟ್ಟಹಾಸ ಮುಂದುವರಿದಿದ್ದು, ಗೋವಂಶ ಸುರಕ್ಷತೆಗೆ ಪ್ರಾರ್ಥಿಸಿ ಈ ತಿಂಗಳ 25ರಂದು ಏಕದಿನ ಉಪವಾಸ ಆಚರಿಸುವಂತೆ ಹಾಗೂ ಜ. 23ರಿಂದ 25ರ ವರೆಗೆ ಕೋಟಿ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರ ಜಪ ಅಭಿಯಾನ ನಡೆಸುವಂತೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಮಂಗಳವಾರ ತುರ್ತು ಸಂದೇಶ ನೀಡಿದ ಅವರು, ಈ ಅಭಿಯಾನಕ್ಕೆ ಅನೇಕ ಮಠಾಧೀಶರು, ಸಾಧು ಸಂತರ ಬೆಂಬಲ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇದುವರೆಗೆ ಕಂಡು, ಕೇಳರಿಯದ ಮತ್ತು ಅತ್ಯಂತ ಕ್ರೂರವಾಗಿ ಗೋವುಗಳ ಮೇಲೆ ಭೀಭತ್ಸ ಹಿಂಸೆ ಆಕ್ರಮಣಗಳು ನಡೆಯುತ್ತಿದ್ದು ಸಮಸ್ತ ಗೋಭಕ್ತರು, ಸನಾತನ ಧರ್ಮೀಯರು ತೀವ್ರ ಸಂಕಟ ದುಃಖ ಅನುಭವಿಸುವಂತಾಗಿದೆ. ಆದರೆ, ಗೋವುಗಳ ಮೇಲೆ ದುರಾಕ್ರಮಣ ನಡೆಸುವವರಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಹಿಂದೂಗಳ ಶ್ರದ್ಧೆಯಂತೆ ಗೋವುಗಳ ಮೇಲಿನ ಈ ರೀತಿಯ ಹಿಂಸೆ, ಗೋವಧೆ, ದುರಾಕ್ರಮಣಗಳು ಗೋವಿನ ಆರ್ತನಾದ ಯಾವ ಕಾರಣಕ್ಕೂ ಶ್ರೇಯಸ್ಸನ್ನುಂಟುಮಾಡದು. ಬದಲಾಗಿ ಅದು ನೆಲದ ದುರ್ಭಿಕ್ಷೆ, ಅಶಾಂತಿ, ಕ್ಷಾಮ ಡಾಮರಗಳಿಗೆ ಕಾರಣವಾಗುತ್ತದೆ.
ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಂದ ಆಘಾತಗೊಂಡಿರುವ ಹಿಂದೂ ಸಮಾಜ ಗೋವಂಶದ ರಕ್ಷಣೆಗೆ ತಕ್ಷಣ ಧಾವಿಸಬೇಕಾಗಿದೆ. ಗೋಹತ್ಯೆ, ಗೋವುಗಳ ಮೇಲಿನ ಕ್ರೂರ ಪೈಶಾಚಿಕ ದೌರ್ಜನ್ಯ ಅಂತ್ಯವಾಗಲೇಬೇಕು. ಗೋವುಗಳಿಗೆ ನೆಮ್ಮದಿಯ ಸುರಕ್ಷಿತ ಬದುಕು ಲಭಿಸಬೇಕು. ಆದರೆ, ಶಾಸನಗಳಿಂದ ಗೋವುಗಳಿಗೆ ನ್ಯಾಯ ಒದಗಿಸುವ ಸ್ಥಿತಿಯಲ್ಲಿ ನಾವಿಲ್ಲ. ಆದ್ದರಿಂದ ಭಗವಂತನಿಗೇ ಶರಣಾಗಬೇಕಾಗಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜ.23ರಿಂದ 29ರ ತನಕ ನಾಡಿನಾದ್ಯಂತ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸಿದ್ದು ಯಾವುದೇ ಜಾತಿ ಮತ ಬೇಧವಿಲ್ಲದೆ ಪುರುಷರು ಹಾಗೂ ಮಹಿಳೆಯರು ಭಾಗವಹಿಸಬೇಕು. ಪ್ರತೀ ಮನೆ ಮನೆಗಳಲ್ಲಿ ಒಂದು ವಾರ ಪರ್ಯಂತ ಎಲ್ಲರೂ ಒಟ್ಟಾಗಿ ದೇವರ ಮುಂದೆ ದೀಪವಿರಿಸಿ ಭಕ್ತಿಯಿಂದ ಗೋವುಗಳ ಮೇಲೆ ಹಿಂಸಾಚಾರ ಗೋಹತ್ಯೆಯಂಥ ದುಷ್ಕೃತ್ಯಗಳ ಅಂತ್ಯ, ಆ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಸದ್ಬುದ್ಧಿ ಮತ್ತು ಗೋವುಗಳಿಗೆ ನೆಮ್ಮದಿ ಮತ್ತು ಸುರಕ್ಷಿತ ಬದುಕು ಒದಗುವಂತಾಗಬೇಕು. ಆ ಮೂಲಕ ನಾಡಿನಲ್ಲಿ ಶಾಂತಿ ಸುಭಿಕ್ಷೆ ಸಮೃದ್ಧಿಯಾಗಬೇಕೆಂದು ಪ್ರಾರ್ಥಿಸಿ ಪಾರಾಯಣ ಮಾಡಬೇಕು ಸಂಘಸಂಸ್ಥೆಗಳು ದೇವಳಗಳಲ್ಲಿ ಸಾಮೂಹಿಕವಾಗಿಯೂ ಪಾರಾಯಣ ನಡೆಸಬಹುದು ಎಂದು ಶ್ರೀಪಾದರು ತಿಳಿಸಿದ್ದಾರೆ.
ಗೋವುಗಳ ಮೇಲಿನ ಕಾರ್ಯವನ್ನು ಸರ್ಕಾರಗಳು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಶ್ರೀಪಾದರು ಆಗ್ರಹಿಸಿದ್ದಾರೆ.