
ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸ್ಥಾಪಿಸುವಂತಿಲ್ಲ
ಮಂಗಳೂರು: ಫ್ಲ್ಯಾಟ್ ಅಸೋಸಿಯೇಶನ್‌ಗೆ ಮೀಸಲಿರಿಸಿದ ಜಾಗವನ್ನು ಬಿಲ್ಡರ್‌ಗಳು ತಮ್ಮದೆಂದು ಹಕ್ಕು ಸಾಧಿಸುವುದು ಸಾಧುವಲ್ಲ ಎಂದು ಮೂಡುಬಿದಿರೆಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬಪ್ಪನಾಡು ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ ಫ್ಲ್ಯಾಟ್ ಅಸೋಸಿಯೇಶನ್ ಸಂಸ್ಥೆಗೆ ಸೇರಿದ 60 ಸೆಂಟ್ಸ್ ಸ್ಥಳದಲ್ಲಿ ಅರ್ಧ ಭಾಗದಲ್ಲಿ ಫ್ಲ್ಯಾಟ್ ಕಟ್ಟಡವಿದ್ದು, ಉಳಿದ ಅರ್ಧ ಜಾಗವು ಸಾಮಾನ್ಯ ಹಕ್ಕಿನ ಸ್ಥಳವಾಗಿತ್ತು. ಆದರೆ ಕಟ್ಟಡದ ಮಾಲಕರು ಮತ್ತು ಬಿಲ್ಡರ್ ಕಟ್ಟಡದ ಸುತ್ತಮುತ್ತ ಸಾಮಾನ್ಯ ಬಳಕೆಗೆ ಮೀಸಲಿರಿಸಿದ ಜಾಗವನ್ನು ದುರುದ್ದೇಶಪೂರ್ವಕವಾಗಿ ಆಕ್ರಮಿಸಿ ಅಕ್ರಮ ಕಟ್ಟಡ ಕಟ್ಟಲು ಮುಂದಾಗಿದ್ದರು. ಈ ಬಗ್ಗೆ ಕಟ್ಟಡದ ಫ್ಲ್ಯಾಟ್ ಮಾಲಕರ ಸಂಘ ಸಿವಿಲ್ ನ್ಯಾಯಾಲಯದಲ್ಲಿ ಶಾಶ್ವತ ಪ್ರತಿಬಂಧಕಾಜ್ಞೆ ದಾವೆ ಹೂಡಿತ್ತು. ಅದಕ್ಕೆ ಪ್ರತಿಯಾಗಿ ಬಿಲ್ಡರ್ ಸಂಸ್ಥೆಯು ಸಾಮಾನ್ಯ ಸ್ಥಳವನ್ನು ಫ್ಲ್ಯಾಟ್ ಮಾಲಕರಿಗೆ ಕೊಟ್ಟಿಲ್ಲ ಮತ್ತು ಕಾಮನ್ ಏರಿಯಾದಲ್ಲಿ ಬಾವಿ ತೋಡಿದ್ದನ್ನು ಮುಚ್ಚಿಸಬೇಕು ಎಂದು ಪ್ರತಿದಾವೆ ಹೂಡಿತ್ತು.
ದೀರ್ಘಕಾಲ ಸಾಕ್ಷಿ ವಿಚಾರಣೆ ನಡೆದು, ವಾದ ಪ್ರತಿವಾದಗಳನ್ನು ಆಲಿಸಿದ ಅನಂತರ ನ್ಯಾಯಾಲಯವು ಕಟ್ಟಡದ ಸುತ್ತಮುತ್ತ ಕಾಮನ್ ಏರಿಯಾ ಅಥವಾ ಸಾಮಾನ್ಯ ಸ್ಥಳಕ್ಕೆಂದು ಡೀಡ್ ಆಫ್ ಡಿಕ್ಲರೇಶನ್ ದಾಖಲೆಯಲ್ಲಿ ಸ್ಪಷ್ಟವಾಗಿ ನಮೂದಿಸಿ ಮೀಸಲಿರಿಸಿದ ಸ್ಥಳದಲ್ಲಿ ಕಟ್ಟಡದ ಮಾಲಕರು ಅಥವಾ ಬಿಲ್ಡರ್ ಯಾವುದೇ ರೀತಿಯಲ್ಲಿ ಹಕ್ಕು ಸಾಧಿಸುವುದನ್ನು ಮಾನ್ಯ ಮಾಡಲಾಗದು ಎಂದು ನ್ಯಾಯಾಲಯವು ಫ್ಲ್ಯಾಟ್ ಮಾಲಕರ ಸಂಘದ ದಾವೆಯನ್ನು ಪುರಸ್ಕರಿಸಿದೆ. ಫ್ಲ್ಯಾಟ್ ಮಾಲಕರ ಸಂಘದ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.