
ಸಾರಿಗೆ ದರ ಹೆಚ್ಚಳ ಜನ ವಿರೋಧಿ ಸರ್ಕಾರ: ಸಿಪಿಐ (ಎಂ)
ಉಡುಪಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರ ಶೇ. 15ರಷ್ಟು ಹೆಚ್ಚಿಸಿರುವ ರಾಜ್ಯ ಸರಕಾರ ಕ್ರಮವನ್ನು ಸಿಪಿಐ (ಎಂ) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ಡೀಸೆಲ್ ದರ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಅಪ್ರಜಾಸತ್ತಾತ್ಮಕ ಮತ್ತು ಅವೈಜ್ಞಾನಿಕವಾಗಿದೆ. ಅಲ್ಲದೆ, ಇದು ಸಾಮಾನ್ಯ ಜನರ ವಿರೋಧಿಯಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನರಳುತ್ತಿರುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಸರಕಾರ ದರ ಹೆಚ್ಚಳದ ತೀರ್ಮಾನವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಎಚ್ಚರಿಸಿದ್ದಾರೆ.
ಡೀಸೆಲ್ ಹೆಚ್ಚಳವಾಗಿದೆ ಎನ್ನುವ ಸರ್ಕಾರ, ಡೀಸೆಲ್ ದರ ಇಳಿದಾಗ ದರ ಎಂದಾದರೂ ಕಡಿಮೆ ಮಾಡಿದೆಯೇ? ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆಯ ಡೀಸೆಲ್ ದರ ಕಡಿಮೆ ಇಡಬೇಕಾದುದು ಸರಕಾರದ ಜವಾಬ್ದಾರಿ. ವಿಪರ್ಯಾಸವೆಂದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರ ಮುಕ್ತ ಮಾರುಕಟ್ಟೆ ದರಕ್ಕಿಂತ ದುಬಾರಿಯಾಗಿದೆ. ಸರಕಾರಕ್ಕೆ ನಿಜಕ್ಕೂ ವೆಚ್ಚ ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು ಅಥವಾ ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇ. 15ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಎಂಬ ಕಾರಣ ಸುಳ್ಳು ನೆಪ ಎಂದವರು ತಿಳಿಸಿದ್ದಾರೆ.