
ಟ್ರಾವೆಲ್ ಏಜೆನ್ಸಿ ವಂಚನೆ: ಅತಂತ್ರಗೊಂಡ ಹಜ್ ಯಾತ್ರಿಕರ ನೆರವಿಗೆ ನಿಂತ ಮೊಹಿಯುದ್ದೀನ್ ಬಾವ
ಮಂಗಳೂರು: ಮೆಕ್ಕಾ- ಮದೀನಾ ಯಾತ್ರೆಗೆ ತೆರಳಿದ್ದ ಜಿಲ್ಲೆಯ ವಿವಿಧೆಡೆಯ 172 ಮಂದಿ ಯಾತ್ರಿಕರನ್ನು ಟ್ರಾವೆಲ್ ಏಜೆನ್ಸಿಯವರು ಮದೀನಾದಲ್ಲಿ ಬಿಟ್ಟು ಹೋಗಿದ್ದು, ಅಲ್ಲಿ ಅತಂತ್ರಗೊಂಡವರನ್ನು ಮಾಜಿ ಶಾಸಕ ಮೊಹಿಯುದ್ದೀನ್ ಬಾವ ತಮ್ಮ ಸ್ನೇಹಿತರ ನೆರವಿನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಿದ್ದಾರೆ.
ಕಬಕದ ಮಹಮ್ಮದಿಯಾ ಟ್ರಾವೆಲ್ ಏಜೆನ್ಸಿಯವರು ಉಮ್ರಾ ಯಾತ್ರೆಗಾಗಿ 17 ದಿನಗಳ ಹಿಂದೆ 172 ಮಂದಿಯನ್ನು ಕರೆದೊಯ್ದಿದ್ದರು. ಪವಿತ್ರ ಮೆಕ್ಕಾಕ್ಕೆ ಕರೆದುಕೊಂಡು ಹೋಗಿ ಬಳಿಕ ಮದೀನಾಕ್ಕೆ ತೆರಳಿದ್ದರು. ಅಲ್ಲಿ ಅಷ್ಟೂ ಮಂದಿ ಯಾತ್ರಾರ್ಥಿಗಳನ್ನು ಬಿಟ್ಟು ಏಜೆನ್ಸಿಯವರು ಭಾರತಕ್ಕೆ ಪಲಾಯನ ಮಾಡಿದ್ದು, ಯಾತ್ರಾರ್ಥಿಗಳು ಅತಂತ್ರಗೊಂಡಿದ್ದರು.
172 ಮಂದಿಯಲ್ಲಿ ನೂರಕ್ಕೂ ಅಧಿಕ ಮಂದಿ ತಮ್ಮ ಸಂಬಂಧಿಕರ ನೆರವಿನಿಂದ ಹಣ ಕೂಡಿಸಿ ಭಾರತಕ್ಕೆ ವಾಪಸಾಗಿದ್ದಾರೆ. ಆದರೆ ಮಹಿಳೆಯರು, ವೃದ್ಧರು ಸೇರಿದಂತೆ 58 ಮಂದಿ ನೆರವು ಸಿಗದೆ ಕಂಗಾಲಾಗಿದ್ದರು. ಔಷಧಿ, ಊಟ, ವಸತಿ ಇಲ್ಲದೆ ಪರದಾಟ ನಡೆಸಿದ್ದರು. ವಿಷಯ ತಿಳಿದ ಮೊಹಿಯುದ್ದೀನ್ ಬಾವ, ತಕ್ಷಣ ಸೌದಿಯಲ್ಲಿದ್ದ ತನ್ನ ಸ್ನೇಹಿತರು, ವಿವಿಧ ಸಂಘಟನೆಗಳನ್ನು ಸಂಪರ್ಕಿಸಿ ಅಷ್ಟೂ ಮಂದಿಯ ಪ್ರಯಾಣದ ಹಣವನ್ನು ಹೊಂದಿಸಿದ್ದಾರೆ. ಮಂಗಳೂರು, ಕಣ್ಣೂರು, ಕ್ಯಾಲಿಕಟ್, ಬೆಂಗಳೂರು ಏರ್ಪೋರ್ಟ್ ಮೂಲಕ ಎಲ್ಲ ಸಂತ್ರಸ್ತರು ಊರಿಗೆ ಮರಳಿದ್ದಾರೆ.
ವಂಚಕ ಏಜೆನ್ಸಿಗಳ ವಿರುದ್ಧ ಕ್ರಮ ಆಗಲಿ:
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮೊಹಿಯುದ್ದೀನ್ ಬಾವ, ಮದೀನಾದಲ್ಲಿ ಯಾತ್ರಾರ್ಥಿಗಳು ಸಿಲುಕಿರುವ ಸುದ್ದಿ ತಿಳಿದ ತಕ್ಷಣ ಸ್ನೇಹಿತರ ಮೂಲಕ ಅವರ ಸುರಕ್ಷತೆಗೆ ಆದ್ಯತೆ ನೀಡಲಾಯಿತು. ಬಳಿಕ 58 ಮಂದಿಯ ಪ್ರಯಾಣ ವೆಚ್ಚವನ್ನು ನಾವೆಲ್ಲರೂ ಸೇರಿ ಹೊಂದಿಸಿಕೊಂಡು ಊರಿಗೆ ಕರೆತಂದಿದ್ದೇವೆ. ರಿಟರ್ನ್ ಟಿಕೆಟ್ ಪಡೆಯದೆ ಕೇವಲ ಡಮ್ಮಿ ಟಿಕೆಟ್ ಪಡೆದುಕೊಂಡು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿ ವಿರುದ್ಧ ಹಾಗೂ ಇದಕ್ಕೆ ಅನುವು ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಸಾರ್ವಜನಿಕರನ್ನು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿಗಳ ಲೈಸನ್ಸ್ ಕೂಡ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ವಿಚಾರದ ಕುರಿತು ಕೆಲವು ಸಂತ್ರಸ್ತರು ದೂರು ದಾಖಲಿಸಿದ್ದಾರೆ. ಎಲ್ಲರೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ತೆರಳಿ ದೂರು ದಾಖಲಿಸಲು ಮುಂದಾಗಬೇಕು ಎಂದು ಬಾವ ಮನವಿ ಮಾಡಿದರು.