
ತಾಂತ್ರಿಕ ದೋಷ: ವಿಮಾನ ರದ್ದು
ಮಂಗಳೂರು: ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಹೊರಡಬೇಕಾಗಿದ್ದ ಮಂಗಳೂರು-ದಮ್ಮಾಮ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಹಾರಾಟ ರದ್ದಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 7 ಗಂಟೆಗೆ ಹೊರಡಬೇಕಾಗಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನದ ಹಾರಾಟ ರದ್ದಾಗಿದೆ.
ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ತಜ್ಞರು ಎರಡು ಗಂಟೆಗಳ ಕಾಲ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಹೀಗಾಗಿ ವಿಮಾನ ಹಾರಾಟವನ್ನು ರದ್ದು ಮಾಡುವ ನಿರ್ಧಾರವನ್ನು ಸಂಬಂಧಪಟ್ಟವರು ಕೈಗೊಂಡರು ಎಂದು ಮೂಲಗಳು ತಿಳಿಸಿವೆ. ಸಂಜೆ 6.30ಕ್ಕೆ ವಿಮಾನ ಹತ್ತಿದ್ದ ಪ್ರಯಾಣಿಕರನ್ನು ಬಳಿಕ ಕೆಳಗೆ ಇಳಿಸಲಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ 7 ಗಂಟೆಗೆ ಹೊರಡಲಿರುವ ಮಂಗಳೂರು -ದಮ್ಮಾಮ್ ವಿಮಾನದಲ್ಲಿ ಪ್ರಯಾಣಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ.
ಮಂಗಳೂರು-ದಮ್ಮಾಮ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆಗಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಇಂದು ರಾತ್ರಿ ವಿಮಾನದ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ನೂರಾರು ಮಂದಿಗೆ ತೊಂದರೆಯಾಗಿದೆ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.