
ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ
Wednesday, January 29, 2025
ಮಂಗಳೂರು: ಮೂಲ್ಕಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ತನ್ನ ಪುತ್ರಿ ಮೊಬೈಲ್ ಬಳಸಿದ ಕಾರಣ ನೀಡಿ ಅ.5ರಂದು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಮನೆಗೆ ಕಳುಹಿಸಿದ್ದು, ಈಗ ಆಕೆ ಮಾನಸಿಕವಾಗಿ ರೋಸಿ ಹೋಗಿದ್ದಾಳೆ ಎಂದು ಆಕೆಯ ತಂದೆ ಕಡಬದ ಸೆಬಾಸ್ಟಿಯನ್ ಅಳಲು ತೋಡಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ವರ್ಷದ ಶಿಕ್ಷಣ ಪೂರೈಸಿದ ಅವಳ ಎರಡನೇ ವರ್ಷದ ಶುಲ್ಕ 1 ಲಕ್ಷ ರೂ. ಪಾವತಿಸಲಾಗಿತ್ತು. ಆದರೆ ಮೊಬೈಲ್ ಬಳಸಿದ ಕಾರಣ ನೀಡಿ ಏಕಾಏಕಿ ಕಾಲೇಜಿನಿಂದ ಹೊರಗೆ ಕಳುಹಿಸಲಾಗಿದೆ. ಮಾತ್ರವಲ್ಲದೆ ಆಕೆಯ ಮೊಬೈಲ್‌ನ್ನು ಕೂಡಾ ಕಾಲೇಜಿನವರು ತೆಗೆದು ಇರಿಸಿಕೊಂಡಿದ್ದಾರೆ. ಕಾಲೇಜಿಗೆ ನೀಡಲಾದ ಎಸ್ಸೆಸ್ಸೆಲ್ಸಿ, ಪಿಯುಸಿ ಮೂಲ ಅಂಕ ಪಟ್ಟಿಯನ್ನೂ ನೀಡಿಲ್ಲ. ಕಾಲೇಜಿಗೆ ಹೋಗಿ ಕೇಳಿದರೂ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಈ ಬಗ್ಗೆ ಡಿ.12ರಂದು ಮೂಲ್ಕಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಅದರಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೂ ತೊಡಕಾಗಿದೆ ಎಂದು ಆರೋಪಿಸಿದರು.
ಕಾಲೇಜಿನ ಇತರ ವಿದ್ಯಾರ್ಥಿಗಳಾದ ಮೊಹಮ್ಮದ್ ಮೊಹಿಸೀನ್, ಮೊಹಮ್ಮದ್ ಮುಸ್ತಫಾ, ಅಜ್ಮಲ್, ಮೊಹಮ್ಮದ್ ರಶೀದ್ ಮಾತನಾಡಿ, ಕಾಲೇಜಿನಲ್ಲಿ 3 ಪಟ್ಟು ಹೆಚ್ಚು ಶುಲ್ಕ ಕೇಳುತ್ತಿದ್ದು, ಕಟ್ಟದಿರುವುದಕ್ಕೆ ಪರಿಕ್ಷೆಯ ಹಾಲ್ ಟಿಕೆಟ್ ಕೊಟ್ಟಿಲ್ಲ ಎಂದು ದೂರಿದರು.