
ಖರ್ಗೆ ಹೇಳಿಕೆಗೆ ಶಾಸಕ ಯಶಪಾಲ್ ಸುವರ್ಣ ಆಕ್ಷೇಪ
Wednesday, January 29, 2025
ಉಡುಪಿ: ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ಹೋಗುವುದಿಲ್ಲ ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬೇಜಾವಾಬ್ದಾರಿಯುತವಾದುದು. ರಾಜ್ಯ, ರಾಷ್ಟ್ರದ ದೊಡ್ಡ ನಾಯಕನಿಗೆ ಇದು ಶೋಭೆ ತರುವುಲ್ಲ. ಇದು ಖರ್ಗೆಯ ಪ್ರಾಯದೋಷ ಹೇಳಿಕೆಯೋ ಅಣತವಾ ಕಾಂಗ್ರೆಸ್ ಪ್ರೇರಿತ ಹೇಳಿಕೆಯೋ ಗೊತ್ತಾಗುತ್ತಿಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ. ಮೋದಿ, ಅಮಿತ್ ಶಾ ನೂರು ಜನ್ಮ ಎತ್ತಿದರೂ ಸ್ವರ್ಗಕ್ಕೆ ಹೋಗುವುದಿಲ್ಲ, ನರಕಕ್ಕೇ ಹೋಗುತ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.
ದೇಶದ ಕೋಟ್ಯಂತರ ಜನರು ಹಾಗೂ ವಿದೇಶದ ಅನೇಕ ಮಂದಿ ಮಹಾಕುಂಭಮೇಳದಲ್ಲಿ ಭಾಗಿಯಾಗಬೇಕು ಎಂಬ ಹಂಬಲದಲ್ಲಿದ್ದಾರೆ. ಆದರೆ, ಖರ್ಗೆ ಹೇಳಿಕೆ ವಿಶ್ವದ ಜನರನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಖರ್ಗೆಯವರ ಪ್ರಾಯದೋಷದ ಹೇಳಿಕೆಯಾಗಿದ್ದರೆ ಕಾಂಗ್ರೆಸ್ ನ ಇತರ ನಾಯಕರು ಸ್ಪಷ್ಟನೆ ಕೊಡಬೇಕು ಎಂದು ಶಾಸಕ ಯಶಪಾಲ್ ಒತ್ತಾಯಿಸಿದರು.