ಬೆಂದೂರು ಪಂಪ್‌ಹೌಸ್ ನೀರು ಕುಡಿಯಲು ಯೋಗ್ಯವಲ್ಲ: ಐವನ್ ಡಿ'ಸೋಜಾ

ಬೆಂದೂರು ಪಂಪ್‌ಹೌಸ್ ನೀರು ಕುಡಿಯಲು ಯೋಗ್ಯವಲ್ಲ: ಐವನ್ ಡಿ'ಸೋಜಾ

ಮಂಗಳೂರು: ಪಾಲಿಕೆ ವ್ಯಾಪ್ತಿಯ ಒಂದು ಭಾಗಕ್ಕೆ ಶುದ್ಧೀಕರಿಸದ ನೀರನ್ನು ನೀಡುತ್ತಿರುವ ಪಾಲಿಕೆಯ ವಿಪಕ್ಷ ಸದಸ್ಯರ ಆರೋಪವನ್ನು ಮತ್ತೆ ಪ್ರತಿಪಾದಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಬೆಂದೂರು ಪಂಪ್‌ಹೌಸ್‌ನ ನೀರಿನ ಗುಣಮಟ್ಟದ ಪ್ರಯೋಗಾಲಯ ಪರೀಕ್ಷೆಯಿಂದ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಮನಪಾ ಕಟ್ಟಡದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಫಿಶರೀಸ್ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆಸಲಾದ ಬೆಂದೂರ್ ಪಂಪ್‌ಹೌಸ್‌ನ ನೀರಿನ ಗುಣಮಟ್ಟ ತಪಾಸಣೆಯ ವರದಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು. 

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕರು ಹಾಗೂ ಸದಸ್ಯರು ನಗರದ ಜನರಿಗೆ ಪೂರೈಕೆ ಮಾಡುವ ನೀರಿನ ಶುದ್ಧತೆಯ ಬಗ್ಗೆ ಆರೋಪಿಸಿದ್ದರು. ಆಡಳಿತ ಪಕ್ಷದ ಸದಸ್ಯರನೇಕರು ಕೂಡಾ ಎಸ್ಟಿಪಿಗಳ ಕಾರ್ಯ ನಿರ್ವಹಣೆಯ ಬಗ್ಗೆ ಧ್ವನಿ ಎತ್ತಿದ್ದರು. ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆಯ ಆಡಳಿತ ಹಾಗೂ ವಿಪಕ್ಷ ಸದಸ್ಯರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚಿಸಲು ನಾನು ಸಲಹೆ ನೀಡಿದ್ದೆ. ನಮ್ಮ ಉದ್ದೇಶ ವ್ಯವಸ್ಥೆ ಸರಿ ಆಗಬೇಕು ಎಂಬುದಾಗಿತ್ತು. ಆದರೆ ಆಡಳಿತ ಪಕ್ಷವಾದ ಬಿಜೆಪಿಯ ಹಿರಿಯ ಸದಸ್ಯರು ಮಾತ್ರವಲ್ಲದೆ ಮೇಯರ್ ಕೂಡಾ ಶುದ್ಧ ನೀರನ್ನೇ ಜನರಿಗೆ ನೀಡುವುದಾಗಿ ಹೇಳಿದ್ದರಲ್ಲದೆ, ಸತ್ಯಶೋಧನಾ ಸಮಿತಿಯ ಸಲಹೆಯನ್ನು ತಳ್ಳಿ ಹಾಕಿದ್ದರು. ಆದರೆ ಜವಾಬ್ಧಾರಿಯ ನೆಲೆಯಲ್ಲಿ ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್ ನೇತೃತ್ವದ ಸತ್ಯ ಶೋಧನಾ ಸಮಿತಿಯು ಈಗಾಗಲೇ ಪಚ್ಚನಾಡಿ, ಬೆಂದೂರ್ವೆಲ್, ಕಡೆಕಾರು, ಜಪ್ಪಿನೊಗರು, ಚೇಳ್ಯಾರು, ಮದ್ಯ ಕಂಡೇವು, ಮುಚ್ಚೂರು ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದ್ದಲ್ಲದೆ ಎಸ್ಟಿಪಿ ಹಾಗೂ ಪಂಪ್ಹೌಸ್ಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದೆ. ಬೆಂದೂರ್ವೆಲ್ನ ಪಂಪ್ಹೌಸ್ನಿಂದ ಸುರತ್ಕಲ್, ಪಣಂಬೂರು, ಕೂಳೂರು, ಕೊಟ್ಟಾರ, ಕೋಡಿಕಲ್ ಸೇರಿ ಸುಮಾರು ೧೦ಕ್ಕೂ ಅಧಿಕ ವಾರ್ಡ್ಗಳಿಗೆ ಪೂರೈಕೆಯಾಗುವ ನೀರಿನ ಮಾದರಿಯನ್ನು ಫಿಶರೀಸ್ ಕಾಲೇಜಿನ ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸಲಾಗಿದೆ. ವರದಿಯಲ್ಲಿ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಉಲ್ಲೇಖಿಸಲಾಗಿದೆ. ಪಾಲಿಕೆಯ ಆಡಳಿತ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಸಂಗ್ರಹ ಸೇರಿದಂತೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು. 

‘ಪಾಲಿಕೆಯ ಕುಡಿಯುವ ನೀರು ಪೂರೈಕೆಯ ಜಾಲ ಹಾಗೂ ಎಸ್‌ಟಿಪಿಗಳ ಅವ್ಯವಸ್ಥೆ ಬಗ್ಗೆ ಸತ್ಯಶೋಧನಾಏ ಸಮಿತಿ ವಿಸ್ತೃತವಾಗಿ ಅಧ್ಯಯನ ನಡೆಸಿದೆ. ಎಸ್ಟಿಪಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕಲುಷಿತ ನೀರು ಚರಂಡಿಗಳ ಮೂಲಕ ಕೆರೆ, ನದಿಗಳಿಗೆ ಸೇರುತ್ತಿದೆ. ಈ ಬಗ್ಗೆ ಎರಡು ವರ್ಷಗಳಿಂದ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ಗಮನವನ್ನು ವಿಪಕ್ಷ ಸದಸ್ಯರು ಸೆಳೆಯುತ್ತಿದ್ದೇವೆ. ಜನರ ಕಳಕಳಿಯಿಂದ ಅಧ್ಯಯನ ನಡೆಸಿದ್ದು, ಮುಂದೆ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷದ ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್ ಹೇಳಿದರು.

ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಕೇಶವ ಮರೋಳಿ, ಅಶ್ರಫ್, ಕಿಶೋರ್ ಶೆಟ್ಟಿ, ಸತೀಶ್ ಪೆಂಗಲ್, ಚೇತನ್ ಕುಮಾರ್, ಹೇಮಂತ್ ಗರೋಡಿ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article