
ಬೀದಿ ವ್ಯಾಪಾರಿಗಳ ಸಂಕಷ್ಟದ ಕಾಲದಲ್ಲಿ ಸಂಭ್ರಮಿಸುವುದು ಅತ್ಯಂತ ಹೀನ ಮನಸ್ಥಿತಿ
ಮಂಗಳೂರು: ಟೈಗರ್ ಕಾರ್ಯಾಚರಣೆಯಿಂದ ಅಪಾರ ನಷ್ಟ ಮತ್ತು ಮಾನಸಿಕ ನೋವು ಅನುಭವಿಸಿ ಸಂಕಷ್ಟದಲ್ಲಿರುವಾಗ ಬೀದಿ ವ್ಯಾಪಾರಿಗಳ ದಿನಾಚರಣೆಯ ಹೆಸರಿನಲ್ಲಿ ಬೀದಿ ವ್ಯಾಪಾರಿಗಳ ಲಕ್ಷಾಂತರ ರೂ. ವ್ಯರ್ಥ ಮಾಡಿ ಶ್ರೇಯೋಭಿವೃದ್ಧಿ ಸಂಘ ಏನನ್ನು ಸಾಧಿಸಲು ಹೊರಟಿದ್ದೇವೆ ಎಂದು ಅರ್ಥವಾಗುತ್ತಿಲ್ಲ. ಲೇಡಿಹಿಲ್ ಬೀದಿ ವ್ಯಾಪಾರಿಗಳು ಟೈಗರ್ ಧಾಳಿಯಿಂದ ಇಂದಿಗೂ ಅಲ್ಲಿ ವ್ಯಾಪಾರ ಮಾಡಲು ಅವಕಾಶ ಸಿಕ್ಕದೆ ಮನೆ ಮಠ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಉಪಾಧ್ಯಕ್ಷ ಹಸನ್ ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಟೇಟ್‌ಬ್ಯಾಂಕಿನ ಬೀದಿ ವ್ಯಾಪಾರಿಗಳು ಅವೈಜ್ಞಾನಿಕ ಬೀದಿ ವಲಯ ನಿರ್ಮಾಣದಿಂದ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆಗೆ ಒಳಗಾಗಿ ದಿನನಿತ್ಯ ಪಾಲಿಕೆಯ ಅಧಿಕಾರಿಗಳ ಧಾಳಿಯ ಆತಂಕದಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.
ಶ್ರೇಯೋಭಿವೃದ್ಧಿ ಸಂಘದ ಮುಖಂಡರ ಮಾತು ನಂಬಿ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡುತ್ತಿರುವ ಆಹಾರ ಮಾರಾಟಗಾರರು ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುತ್ತಾ ವಲಯದಿಂದ ಹೊರ ಬರಲು ಆಗದೇ, ಒಳಗೂ ನಿಲ್ಲಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಸೆಂಟ್ರಲ್ ಮಾರ್ಕೆಟ್ ಬೀದಿ ವ್ಯಾಪಾರಿಗಳಿಗೆ ಇನ್ನೂ ಪರ್ಯಾಯ ವ್ಯವಸ್ಥೆಯ ಬಗ್ಗೆ ಇನ್ನೂ ಖಾತರಿ ಸಿಗದೆ ಮಾರ್ಕೆಟ್ ನೀಮಾಣಕಾರರು ಬೇಲಿಗಳನ್ನು ಹಾಕಿ ಇಂದೋ ನಾಳೆಯೋ ಧಾಳಿಗಳು ನಡೆಯಬಹೋದೆನೋ ಎಂಬ ಭಯದಲ್ಲಿದ್ದಾರೆ.
ಬೀದಿ ವ್ಯಾಪಾರಿಗಳು ಇಂಥ ಕಠಿಣ ನೋವಿನ ಛಾಯೆಯಲ್ಲಿರುವಾಗ ನಮ್ಮ ಮೇಲೆ ಧಾಳಿ ಮಾಡಿದ, ಮಾಡಿಸಿದ ಅಧಿಕಾರಿಗಳು ಮತ್ತು ಜನಪೆತಿನಿಧಿಗಳನ್ನು ಕರೆಸಿ ಸಂಭ್ರಮ ಪಡಲು ಮನಸ್ಥಿತಿ ಒಪ್ಪುತ್ತಿದೆಯೇ?
ಬೀದಿ ವ್ಯಾಪಾರಿಗಳು ಸಂಕಷ್ಟದಲ್ಲಿರುವಾಗ ಬಲವಂತವಾಗಿ ಬ್ಯಾನರ್ ಹಾಕಿಸಿ, ಸಾರಿ ಖರೀದಿ ಮಾಡಿಸಿ ಬೀದಿ ವ್ಯಾಪಾರಿಗಳ ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಟ್ಟಿದ್ದ ಹಣದಿಂದ ಲಕ್ಷಾಂತರ ರೂಪಾಯಿಯ ಫ್ಲೆಕ್ಸ್‌ಗಳು ಹಾಕಬೇಕಿತ್ತೆ?
ನನ್ನವರು ನೋವಿನಲ್ಲಿರುವಾಗ ನಮ್ಮವರಿಗೆ ಅನ್ಯಾಯ ಮಾಡಿದವರನ್ನು ಕರೆಸಿ ಸಂಭ್ರಮ ಪಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನಾನು ಸಮಾವೇಶ ಬಹಿಷ್ಕರಿಸುತ್ತಿದ್ದೇನೆ. ನೀವು ಬಹಿಷ್ಕರಿಸಿ ಎಂದು ಹಸನ್ ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.