
ಚಿನ್ನದ ಬೇಟೆ ಮುಂದುವರಿಸಿದ ಆಳ್ವಾಸ್ ಹಾಗೂ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು
Sunday, January 19, 2025
ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಎರಡನೇ ದಿನ ವೇಟ್‌ಲಿಫ್ಟಿಂಗ್ ಪಂದ್ಯದಲ್ಲಿ ಮೂಡುಬಿದಿರೆ ಆಳ್ವಾಸ್ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಎರಡನೇ ದಿನವೂ ಚಿನ್ನದ ಬೇಟೆ ಮುಂದುವರಿಸಿದ್ದಾರೆ.
ಪುರುಷರ 67 ಕೆಜಿ ಮತ್ತು ಮಹಿಳೆಯರ 55 ಕೆಜಿ, 64 ಕೆಜಿ ಮತ್ತು 71 ಕೆಜಿ ವಿಭಾಗಗಳಲ್ಲಿ ಆಳ್ವಾಸ್ ಹಾಗೂ 49 ಕೆಜಿ, 73 ಕೆಜಿ ವಿಭಾಗಗಳಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ.
71 ಕೆಜಿ ಮಹಿಳಾ ವಿಭಾಗದಲ್ಲಿ ಆಳ್ವಾಸ್‌ನ ಸೀಮಾ ಅಜಯ್‌ಕಾಂತ್ 140 ಕೆಜಿ ಭಾರ ಎತ್ತಿ ಚಿನ್ನದ ಪದಕ ಪಡೆದರು. ಉಜಿರೆ ಎಸ್‌ಡಿಎಂನ ಸಂಗೀತಾ 134 ಕೆಜಿ ಭಾರ ಎತ್ತಿ ಬೆಳ್ಳಿ ಹಾಗೂ ಆಳ್ವಾಸ್‌ನ ಮಲ್ಲಮ್ಮ ಕನಬೂರು ಕಂಚಿನ ಪದಕ ಗಳಿಸಿದರು. 64 ಕೆಜಿ ವಿಭಾಗದಲ್ಲಿ ಆಳ್ವಾಸ್‌ನ ಅನುಷಾ 150 ಕೆಜಿ ಭಾರ ಎತ್ತಿ ಚಿನ್ನ, ಪುತ್ತೂರು ಫಿಲೋಮಿನಾ ಕಾಲೇಜಿನ ಬೆಲ್ಲಾ ಪಿ.ಟಿ. 149 ಕೆಜಿ ಭಾರ ಎತ್ತಿ ಬೆಳ್ಳಿ, ಉಜಿರೆ ಎಸ್‌ಡಿಎಂನ ಸನಿಕಾ ಗೌಡ 141 ಕೆಜಿ ಭಾರ ಎತ್ತಿ ಕಂಚಿನ ಪದಕ ಪಡೆದರು.
49 ಕೆಜಿ ವಿಭಾಗದಲ್ಲಿ ಎಸ್‌ಡಿಎಂ ಉಜಿರೆಯ ಸ್ವಪ್ನ ವೈ.ಜೆ. 162 ಕೆಜಿ ಭಾರ ಎತ್ತಿ ಚಿನ್ನ ಗಳಿಸಿದರು. ಬೆಳಗಾವಿ ಡೈಸಿಸ್‌ನ ಸಮೀಕ್ಷಾ 112 ಕೆಜಿ ಭಾರ ಎತ್ತಿ ಬೆಳ್ಳಿ ಹಾಗೂ ಮಂಗಳಾ ಥೋವರ್ಸ್‌ನ ಐಶ್ವರ್ಯ 86 ಕೆಜಿ ಭಾರ ಎತ್ತಿ ಕಂಚಿನ ಪದಕ ಪಡೆದರು. 55 ಕೆಜಿ ವಿಭಾಗದಲ್ಲಿ ಆಳ್ವಾಸ್‌ನ ಮೊನಿಷಾ 142 ಕೆಜಿ ಭಾರ ಎತ್ತಿ ಚಿನ್ನ, ಡೈಸಿಸ್ ಬೆಂಗಳೂರಿನ ಆರ್.ಇವಂಜಲಿನ್ 104 ಕೆಜಿ ಭಾರ ಎತ್ತಿ ಬೆಳ್ಳಿ ಹಾಗೂ ಮಂಗಳಾ ಥೋವರ್ಸ್‌ನ ನಂಜನಾ ಕುಲಾಲ್ ಕಂಚಿನ ಪದಕ ಪಡೆದರು.
ಪುರುಷರ 73 ಕೆಜಿ ವಿಭಾಗದಲ್ಲಿ ಉಜಿರೆ ಎಸ್‌ಡಿಎಂನ ಪ್ರಜ್ವಲ್ 273 ಕೆಜಿ ಭಾರ ಎತ್ತಿ ಚಿನ್ನ, ಭದ್ರಾವತಿಯ ಸುಧೀರ್ ಫಿಟ್ನೆಸ್ ಕೇಂದ್ರದ ಫಕೀರ್ ಗೌಡ ಪಾಟೀಲ್ 218 ಕೆಜಿ ಭಾರ ಎತ್ತಿ ಬೆಳ್ಳಿ ಹಾಗೂ ಮಂಗಳಾ ಥೋವರ್ಸ್‌ನ ನಿಶಿಲ್ 201 ಕೆಜಿ ಭಾರ ಎತ್ತಿ ಕಂಚಿನ ಪದಕ ಪಡೆದರು. 67 ಕೆಜಿ ವಿಭಾಗದಲ್ಲಿ ಆಳ್ವಾಸ್‌ನ ಚಿರಂಜೀವಿ 242 ಕೆಜಿ ಭಾರ ಎತ್ತಿ ಚಿನ್ನ, ಸಂಜೀವ ಶೆಟ್ಟಿ ತಂಡ ಬೆಂಗಳೂರಿನ ದೇವೇಂದ್ರ ಬೆಳ್ಳಿ ಹಾಗೂ ಅದೇ ತಂಡ ಮೋಹನ್ ಕಂಚಿನ ಪದಕ ಪಡೆದರು.
ಫುಟ್ಬಾಲ್ ಕ್ವಾರ್ಟರ್ ಫೈನಲ್:
ನೆಹರೂ ಮೈದಾನದಲ್ಲಿ ನಡೆದ ಫುಟ್‌ಬಾಲ್ ಪಂದ್ಯದ 2ನೇ ಕ್ವಾರ್ಟರ್ ಫೈನಲ್‌ನಲ್ಲಿ ಮಂಗಳೂರು ಯುನೈಟೆಡ್ ತಂಡ 3 ಗೋಲು ಗಳಿಸಿದೆ. ಅದಕ್ಕೂ ಮೊದಲು ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಕಸಬಾ ಬ್ರದರ್ಸ್ ಮತ್ತು ಸಂತ ಅಲೋಶಿಯಸ್ ಕಾಲೇಜು ತಂಡ ಟೈ ಬ್ರೇಕರ್ ಆಗಿತ್ತು. ಬಳಿಕ ಅಲೋಶಿಯಸ್ ಕಾಲೇಜು ತಂಡವನ್ನು ಕಸಬಾ ಬ್ರದರ್ಸ್ ತಂಡ ಮಣಿಸಿತ್ತು.
ಉಳಿದಂತೆ ಮಂಗಳೂರಲ್ಲಿ ಫೆನ್ಸಿಂಗ್, ವುಶು ಪಂದ್ಯಗಳು ಮುಂದುವರಿದಿವೆ.