
ಹೆಚ್ಚುತ್ತಿರುವ ಬಡತನದ ನಡುವೆ ಹೊಸ ಭೂಮಾಲಕ ವರ್ಗದ ಸೃಷ್ಟಿಯಾಗಿದೆ: ಮುನೀರ್ ಕಾಟಿಪಳ್ಳ
ಮಂಗಳೂರು: ಕ್ಯಾಲೆಂಡರ್ ಗಳು ಬದಲಾದಂತೆ, ಜನತೆಯ ಸಂಕಷ್ಟಗಳು ಹೆಚ್ಚುತ್ತಾ ಹೋಗುತ್ತಿದೆ. ಬದಲಾವಣೆಯ ನಿರೀಕ್ಷೆಗಳು ಹುಸಿಯಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆ ಪೂರ್ತಿಯಾಗಿ ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್ ಲಾಭಿಗಳ ಕೈಗೆ ಸಿಲುಕಿದೆ. ಅಂದು ಗೇಣಿದಾರ ರೈತರು ನಡೆಸಿದ ಸಮರಶೀಲ ಹೋರಾಟದಿಂದ ಭೂಮಾಲಕ ಪದ್ದತಿ ನಾಶಗೊಂಡಿತ್ತು. ಶಿಕ್ಷಣ, ಆರೋಗ್ಯ ಸಹಿತ ಎಲ್ಲವೂ ಖಾಸಗಿಯವರ ಪಾಲಾಗುತ್ತಿರುವ ಈ ಸಂದರ್ಭ ಹೊಸ ಭೂಮಾಲಕ ವರ್ಗ ಸೃಷ್ಟಿಯಾಗುತ್ತಿದೆ. ಸರಕಾರದ ಉಳ್ಳವರ ಪರ ನೀತಿಗಳಿಂದ ಅಪಾರ ಬಂಡವಾಳ ಶೇಖರಿಸಿರುವ ಧನಿಕರು ನೂರಾರು ಎಕರೆ ಜಮೀನುಗಳನ್ನು ಖರೀದಿಸಿ ನವ ಜಮೀನ್ದಾರಿ ಪದ್ದತಿಯನ್ನು ತುಳುನಾಡಿನಲ್ಲಿ ಸೃಷ್ಟಿಸುತ್ತಿದ್ದಾರೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಉಳ್ಳಾಲ ವಲಯ ಸಮಾನ ಮನಸ್ಕ ಸಂಘಟನೆಗಳು ತೊಕ್ಕೊಟ್ಟಿನಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷದ ಸ್ನೇಹಕೂಟ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಯೆನಪೋಯ ವಿ ವಿಯ ಉಪ ಪ್ರಾಂಶುಪಾಲ ಡಾ. ಜೀವನ್ ರಾಜ್ ಕುತ್ತಾರ್ ಮಾತನಾಡಿ, ಜನತೆಯ ಬದುಕು ಹಸನಾಗಿಸಲು ಚಳವಳಿಗಳು ಇನ್ನಷ್ಟು ಬದ್ದತೆಯಿಂದ ದುಡಿಯಬೇಕಿದೆ ಎಂದು ಹೇಳಿದರು
ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರ ಸುಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಅಭೂತಪೂರ್ವ ಜಯಗಳಿಸಿದ ಗಣೇಶ್ ಅಡ್ಯಂತಾಯರವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ರೈತ ಚಳುವಳಿಯ ಹಿರಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್,ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್, ಸಿಐಟಿಯು ಉಳ್ಳಾಲ ತಾಲೂಕು ಕಾರ್ಯದರ್ಶಿ ರೋಹಿದಾಸ್ ಭಟ್ನಗರ, ಡಿವೈಎಫ್ ಐ ಉಳ್ಳಾಲ ವಲಯಾಧ್ಯಕ್ಷರಾದ ನಿತಿನ್ ಕುತ್ತಾರ್, ರೈತ ನಾಯಕರಾದ ಶೇಖರ್ ಕುಂದರ್,ಕಾರ್ಮಿಕ ಮುಖಂಡರಾದ ಸುಂದರ ಕುಂಪಲ,ಜನಾರ್ಧನ ಕುತ್ತಾರ್, ಚಂದ್ರಹಾಸ್ ಪಿಲಾರ್,ಇಬ್ರಾಹಿಂ ಮದಕ,ಪದ್ಮನಾಭ ಕುಂಪಲ, ರಾಮಚಂದ್ರ ಪಜೀರ್, ವಿಲಾಸಿನಿ,ರತ್ನಮಾಲಾ,ರಫೀಕ್ ಹರೇಕಳ,ಮಹಮ್ಮದ್ ಅನ್ಸಾರ್,ಯುವಜನ ನಾಯಕರಾದ ರಿಜ್ವಾನ್ ಹರೇಕಳ,ಮಿಥುನ್ ರಾಜ್ ಕುತ್ತಾರ್,ರಜಾಕ್ ಮುಡಿಪು, ಅಸ್ಪಕ್ ಅಳೇಕಲ,ಕಲೀಲ್ ಉಳ್ಳಾಲಬೈಲ್,ಮಹಿಳಾ ಮುಖಂಡರಾದ ಪ್ರಮೋದಿನಿ, ನಳಿನಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.