
ಕೋಟೆಕಾರು ಬ್ಯಾಂಕ್ ಕಳ್ಳತನ: ದರೋಡೆಕೋರರ ಚಲನವಲನ ಪತ್ತೆ
ಮಂಗಳೂರು: ಮಂಗಳೂರಿನ ಉಳ್ಳಾಲ ಸಮೀಪದ ಕೋಟೆಕಾರು ಬ್ಯಾಂಕ್‌ನಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪತ್ತೆಯಾಗಿದ್ದು, ದರೋಡೆಕೋರರು ಕೇರಳ ಅಥವಾ ತಮಿಳುನಾಡಿನಲ್ಲಿ ಅಂಡರ್‌ಗ್ರೌಂಡ್ ಆಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆದರೆ, ಇದೀಗ ದರೋಡೆಕೋರರ ಚಲನವಲನ ಪತ್ತೆ ಹಚ್ಚಿದ ಪೊಲೀಸರು ಅವರು ಉತ್ತರ ಭಾರತದತ್ತ ತೆರಳಿದ್ದಾರೆ ಎಂದು ತಿಳಿದಿದೆ.
ದರೋಡೆಕೋರರು ರೈಲಿನಲ್ಲಿ ಉತ್ತರ ಭಾರತದ ಕಡೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಬೆಂಗಳೂರಿನಿಂದ ವಿಮಾನದಲ್ಲಿ ಉತ್ತರ ಭಾರತದತ್ತ ಹೊರಟಿದ್ದಾರೆ.
ಕದ್ದ ಚಿನ್ನ ಸಾಗಿಸಿದ್ದ ಕಾರು ಯಾವುದು?:
ಆರೋಪಿಗಳು ಕದ್ದ ಚಿನ್ನವನ್ನು ಸಾಗಿಸಿದ್ದು ಫಿಯೆಟ್ ಕಾರಿನಲ್ಲಿ ಸಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಆರೋಪಿಗಳು ಕದ್ದ ಚಿನ್ನವನ್ನು ಮತ್ತೊಂದು ಕಾರು ಚೆವ್ರೊಲೆಟ್ ನಲ್ಲಿ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಕಡೆ ಚೆವ್ರೊಲೆಟ್ ಕಾರಿನಲ್ಲಿ ಬಂದ ಮೂವರು ದರೋಡೆಕೋರರು ಬ್ಯಾಂಕ್ ದರೋಡೆ ಮಾಡಿ, ಮಂಗಳೂರಿನಲ್ಲಿ ಮೊಬೈಲ್ ಬಿಸಾಕಿ ಬಂಟ್ವಾಳ ಕಡೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಬಿ.ಸಿ.ರೋಡ್ ಟೋಲ್ ಹಾಗೂ ಸಿಸಿಟಿವಿ ತಪ್ಪಿಸಲು ಟೋಲ್‌ನ ಪಕ್ಕದ ರಸ್ತೆ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಬಳಿಕ ವಿಟ್ಲ ಮೂಲಕ ಕೇರಳ ಗಡಿ ತಲುಪಿ ಕೇರಳದ ಗ್ರಾಮೀಣ ಪ್ರದೇಶ ತಲುಪಿರುವ ಸಾದ್ಯತೆ ಇದೆ. ಎರಡು ದಿಕ್ಕಿನಲ್ಲಿ ಸಾಗಿದ ಕಾರುಗಳು ಕೆಲವೇ ಗಂಟೆಗಳಲ್ಲಿ ಕೇರಳದಲ್ಲೇ ಸಂದಿಸಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಈ ನಿಟ್ಟಿನಲ್ಲಿ ಪೊಲೀಸರ ತಂಡ ಕೇರಳದಲ್ಲಿ ಬೀಡುಬಿಟ್ಟಿದೆ.
ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ:
ದರೋಡೆಕೋರರ ಬಗ್ಗೆ ಲಭ್ಯವಾದ ಮಾಹಿತಿಗಳ ಆಧಾರದ ಮೇಲೆ ಮಂಗಳೂರು ಪೊಲೀಸರು ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಇಬ್ಬರು 2017ರ ದರೋಡೆ ಪ್ರಕರಣದ ಆರೋಪಿಗಳಾಗಿದ್ದರು. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಸಿಸಿಬಿ ಸೇರಿ ವಿವಿಧ ಠಾಣೆಗಳ ಪೊಲೀಸರ ಎಂಟು ತಂಡ ಪ್ರಕರಣದ ತನಿಖೆ ನಡೆಸುತ್ತಿವೆ.
ಉಳ್ಳಾಲ, ತೊಕ್ಕೊಟ್ಟು ಪ್ರದೇಶದಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಸಿಸಿಟಿವಿ ದಾಖಲೆ ಹಾಗೂ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರ ತಂಡಗಳು ಕೇರಳ, ತಮಿಳುನಾಡು, ಮುಂಬೈ, ಗೋವಾದಲ್ಲಿ ಬೀಡು ಬಿಟ್ಟಿವೆ.