ಶಾಶ್ವತ ಚಪ್ಪರಕ್ಕೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಇರುವೈಲು 75ನೇ ಭಜನಾ ಮಂಗಲೋತ್ಸವದಲ್ಲಿ ಶಾಸಕ ಕೋಟ್ಯಾನ್ ಭರವಸೆ

ಶಾಶ್ವತ ಚಪ್ಪರಕ್ಕೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಇರುವೈಲು 75ನೇ ಭಜನಾ ಮಂಗಲೋತ್ಸವದಲ್ಲಿ ಶಾಸಕ ಕೋಟ್ಯಾನ್ ಭರವಸೆ


ಮೂಡುಬಿದಿರೆ: 75ನೇ ವರ್ಷದ ಭಜನಾ ಮಂಗಲೋತ್ಸವದ ಸವಿನೆನಪಿಗಾಗಿ ದೇವಸ್ಥಾನದ ಸುತ್ತಲೂ ಶಾಶ್ವತ ಚಪ್ಪರ ನಿಮಾ೯ಣಕ್ಕೆ ಸರ್ಕಾರ ಅಥವಾ ತನ್ನ ಸ್ವಂತ ಅನುದಾನದಿಂದ 25 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್ ಭರವಸೆಯನ್ನು ನೀಡಿದರು.

ಅವರು ಮಂಗಳವಾರ ಇರುವೈಲು ದಿ. ಸುಲೋಚನ ಐ.ರಾಮ ಆಸ್ರಣ್ಣ ವೇದಿಕೆಯಲ್ಲಿ ನಡೆದ ಇರುವೈಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 75ನೇ ವರ್ಷದ ಭಜನಾ ಮಂಗಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಜನೆಯನ್ನು ಭಕ್ತಿಯಿಂದ ಹೇಗೆ ಹೇಳಿದರೂ ದೇವರಿಗೆ ಸಲ್ಲುತ್ತದೆ. ಭಜನೆಯು ನೇರವಾಗಿ ಭಕ್ತರಿಗೂ ಭಗವಂತನಿಗೂ ಇರುವ ಸಂಪರ್ಕ ಸೇತುವೆ. ಆದ್ದರಿಂದ ಆದಷ್ಟು ಮಕ್ಕಳು ಭಜನೆಯ ಕಡೆಗೆ ಒಲವು ತೋರಬೇಕು. ಭಜನೆಯಿಂದ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವಾಗುತ್ತದೆ ಎಂದರು.

ದೇವಸ್ಥಾನದ ಆಡಳಿತಾಧಿಕಾರಿ ಇಂದು ಎಂ. ಅಧ್ಯಕ್ಷತೆ ವಹಿಸಿದ್ದರು.

ದಿಕ್ಸೂಚಿ ಭಾಷಣಗೈದ ದಾಮೋದರ ಶರ್ಮಾ ಅವರು, ಇತ್ತೀಚಿನ ದಿನಗಳಲ್ಲಿ ಭಜನೆಗೆ ಅವಹೇಳನವಾಗಿ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೆ. ಅಂತವರಿಗೆ ಹಿಂತಿರುಗಿ ಬೈಯಲು ಹೋಗಬೇಡಿ. ಭಜನೆ ಬಗ್ಗೆ ಕೀಳಾಗಿ ಮಾತನಾಡುವವರಿದ್ದರೆ ಅವರು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಕರ್ಮಗಳಿಂದ ಮುಕ್ತರಾಗಿ ಮುಂದಿನ ಜನ್ಮದಲ್ಲಿ ಅವರಿಗೂ ಒಳ್ಳೆಯ ಬುದ್ಧಿಯನ್ನು ನೀಡಿ ಅವರೂ ಭಜನೆ ಸೇವೆಗೆ ಕೈ ಜೋಡಿಸುವಂತೆ ಮಾಡು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಅವರನ್ನು ಗೌರವಿಸಲಾಯಿತು. ಹಾಗೂ ಹಿರಿಯ ಭಜಕರು, ಅನ್ನದಾನ ಸೇವಾದಾರರು, ಹಾಗೂ ಭಜನಾ ಸೇವೆಯಲ್ಲಿ ವಿವಿಧ ರೀತಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಭಜಕರನ್ನು, ಭಕ್ತಾದಿಗಳನ್ನು ಗುರುತಿಸಿ ಗೌರವಿಸಲಾಯಿತು.

ಹಿರಿಯ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿ, ಗಣೇಶ್ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ಶುಭ ನುಡಿಗಳಾನ್ನಾಡಿದರು. 

ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ಮುಗೇರ, ದೇವಸ್ಥಾನದ ಆಡಳಿತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಐ ಕುಮಾರ್ ಶೆಟ್ಟಿ, ಉದ್ಯಮಿ ರಂಜಿತ್ ಪೂಜಾರಿ ಈ ಸಂದರ್ಭದಲ್ಲಿದ್ದರು.

ಭಜನಾ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಮಾಜಿ ಮೋಕ್ತೆಸರ ಎನ್. ದಿವಾಕರ ಪ್ರಭು ನಡುಬಾಳಿಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article