ಆಳ್ವಾಸ್‌ನಲ್ಲಿ 30 ಸಾವಿರ ಮಂದಿಯಿಂದ ಗಣರಾಜ್ಯೋತ್ಸವ ಆಚರಣೆ

ಆಳ್ವಾಸ್‌ನಲ್ಲಿ 30 ಸಾವಿರ ಮಂದಿಯಿಂದ ಗಣರಾಜ್ಯೋತ್ಸವ ಆಚರಣೆ


ಮೂಡುಬಿದಿರೆ: ವಿಶಾಲ ಬಯಲುರಂಗ ಮಂದಿರದಲ್ಲಿ ಕಂಗೊಳಿಸಿದ ದೇಶದ ಐಕ್ಯತೆಯ ಪ್ರತೀಕವಾದ ‘ಆಳ್ವಾಸ್’, ಸೇರಿದ್ದ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿ, ಸಿಬ್ಬಂದಿ, ಪೋಷಕರು, ಅತಿಥಿಗಳ ಕೈಯಲ್ಲಿ ಹಾರಾಡಿದ ರಾಷ್ಟ್ರ ಧ್ವಜ, ಆವರಣದ ಸುತ್ತಲೂ ತ್ರಿವರ್ಣ ಸ್ಥಂಭಗಳು, ದೇಶಪ್ರೇಮ ಮೂಡಿಸುವ ತ್ರಿವರ್ಣ ಚಿತ್ತಾರಗಳು, ತ್ರಿವರ್ಣದ ಪುರುಲಿಯೋ ಸಿಂಹಗಳು, ಜನ ಗಣ ಮನ, ವಂದೇ ಮಾತರಂ, ಕೋಟಿ ಕಂಠೋ ಸೇ... ರಾಷ್ಟ್ರ ಹಾಗೂ ದೇಶಭಕ್ತಿ ಗೀತೆಗಳು....

ಸಂವಿಧಾನ ಅನುಷ್ಠಾನದ ಭಕ್ತಿ, ಗೌರವ, ಪ್ರೀತಿಯ ದೇಶಭಕ್ತಿಯ ಕ್ಷಣಗಳು ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮೂಡಿಬಂತು.


ವಿಧಾನ ಪರಿಷತ್ತಿನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಧ್ವಜಾರೋಹಣ ನೆರವೇರಿಸಿದರು. ನಾವೆಲ್ಲರೂ ಸಂವಿಧಾನ ಬದ್ಧವಾಗಿ ಕರ್ತವ್ಯ ಹಾಗೂ ಹಕ್ಕುಗಳನ್ನು ಪಾಲಿಸುವ ಸಂಕಲ್ಪವನ್ನು ಮಾಡುವ ದಿನವಾಗಿದೆ. ಡಾ. ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವದ ಶ್ರೇಷ್ಠವಾದ ನಮ್ಮ ಸಂವಿಧಾನ ರಚನೆಯಾಗಿ, ಜಾರಿಗೆ ಬಂದಿದೆ. ಇದು ನಮ್ಮ ದೇಶಕ್ಕೆ ಶಕ್ತಿ ತುಂಬಿದ ದಿನ. ಆಳ್ವಾಸ್ ಅಂಗಣದಲ್ಲಿ ಗಣರಾಜ್ಯೋತ್ಸವವು ಐತಿಹಾಸಿಕ ವಿರಾಟ ರಾಷ್ಟ್ರೀಯ ಹಬ್ಬವಾಗಿದೆ. ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಆಳ್ವಾಸ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ತಾಣ ಎಂದರು.

ತಿರಂಗ ಬಣ್ಣದಿಂದ 1920 ವಿದ್ಯಾರ್ಥಿಗಳು ಸುತ್ತಲೂ ಅಂಚನ್ನು ನಿರ್ಮಿಸಿದರೆ, 3188 ವಿದ್ಯಾರ್ಥಿಗಳು ತಿರಂಗದಲ್ಲಿ ‘ಆಳ್ವಾಸ್’ ರಚಿಸಿ ವಿವಿಧತೆಯಲ್ಲಿ ಏಕತೆಯ ಸಂದೇಶ ರವಾನಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ನಿರ್ಮಾಣ ಸಂಸ್ಥೆಯ ಮುಸ್ತಾಫ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ. ವಿನಯ್ ಅಳ್ವ, ಎನ್‌ಸಿಸಿ 19 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ಮುಕುಂದನ್, 18 ಕರ್ನಾಟಕ ಬೆಟಾಲಿಯನ್ ಆಡಳಿತಾಧಿಕಾರಿ ಲೆ. ಕರ್ನಲ್ ರೋಹಿತ್ ರೈ, 300ಕ್ಕೂ ಅಧಿಕ ನಿವೃತ್ತ ಹಾಗೂ ಹಾಲಿ ಸೈನಿಕರು, 1359 ಕಬ್ಸ್-ಬುಲ್ ಬುಲ್, ಸ್ಕೌಟ್ಸ್-ಗೈಡ್ಸ್, ರೋವರ್ಸ್-ರೇಂಜರ್ಸ್ 753 ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಉಪಸ್ಥಿತರಿದ್ದರು.

ರಾಹುಲ್ ಆರ್. ನೇತೃತ್ವದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಗೌರವ ರಕ್ಷೆ ಸಲ್ಲಿಸಿದರು. ವಂದೇ ಮಾತರಂ, ಜನಗಣಮನ ಹಾಗೂ ಕೋಟಿ ಕಂಟೋಸೇ ಗಾಯನ, ಬ್ಯಾಂಡ್ ನಿನಾದವು ಭಾವೈಕ್ಯತೆ ಮೂಡಿಸಿತು. ಸಿಡಿಮದ್ದಿನ ಪ್ರದರ್ಶನವು ಆಕಾಶದಲ್ಲಿ ತಿರಂಗ ಬಣ್ಣಗಳ ವಿಹಂಗಮ ನೋಟ ಮೂಡಿಸಿತು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ, ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article