
ಮಂಡೆಕೋಲುವಿನಲ್ಲಿ ಕಾಡಾನೆ ಸಾವು
Sunday, January 26, 2025
ಸುಳ್ಯ: ಮಂಡೆಕೋಲ ಮೀಸಲು ಅರಣ್ಯ ಎರಕಲಪಾಡಿ ಎಂಬಲ್ಲಿ ಕಾಡಾನೆಯೊಂದು ಮೃತಪಟ್ಟಿರುವುದು ಕಂಡು ಬಂದಿದೆ. ಸುಳ್ಯ ವಲಯ ಅರಣ್ಯ ವ್ಯಾಪ್ತಿಯ ಮಂಡೆಕೋಲು ಗ್ರಾಮದ ಎರ್ಕಲ್‌ಪಾಡಿ ಎಂಬಲ್ಲಿ ಮಂಡೆಕೋಲು ಮೀಸಲು ಅರಣ್ಯದಲ್ಲಿ ಸುಮಾರು 50-55 ವರ್ಷ ಪ್ರಾಯದ ಗಂಡಾನೆಯು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ಕಂಡು ಬಂದಿದೆ.
ಮೇಲ್ನೋಟಕ್ಕೆ ಕಾಡಾನೆಗಳು ಕಾದಾಡಿಕೊಂಡು ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಮೃತಪಟ್ಟಿರುವಂತೆ ಕಂಡು ಬಂದಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎಂ. ಮಂಜುನಾಥ್ ತಿಳಿಸಿದ್ದಾರೆ.
ಆನೆಯ ಮೈಯಲ್ಲಿ ಅಲ್ಲಲ್ಲಿ ಗಾಯಗಳು ಕಂಡು ಬಂದಿದ್ದು ಆನೆಗಳ ಕಾದಾಟದಿಂದ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಆರ್‌ಎಫ್‌ಒ ಮಂಜುನಾಥ್ ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.