
ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ಕಾಮಗಾರಿ: ಸರ್ವೆಗೆ ಬಂದ ಯುಕೆಟಿಎಲ್ ಸ್ಟರ್‌ಲೈಟ್ ಕಂಪನಿಯವರು: ಸ್ಥಳೀಯರಿಂದ ಪ್ರತಿಭಟನೆ
ಮೂಡುಬಿದಿರೆ: ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ಕಾಮಗಾರಿ ನಡೆಸಲು ಯುಕೆಟಿಎಲ್ ಸ್ಟರ್‌ಲೈಟ್ ಕಂಪನಿಯವರು ಸೋಮವಾರ ಮತ್ತೆ ನಿಡ್ಡೋಡಿ ಮಂಜನಬೈಲು ಪ್ರದೇಶಕ್ಕೆ ಜಾಗದ ಸರ್ವೆಗೆ ಆಗಮಿಸಿದಾಗ ಸ್ಥಳೀಯರು ಪ್ರತಿಭಟಿಸಿ ಸರ್ವೆಗೆ ತಡೆಯೊಡ್ಡಿದ್ದಾರೆ.
ಕಂಪೆನಿ ಸಿಬಂದಿಗಳು ಮಂಗಳೂರಿನ ರಿಸರ್ವ್ ಪೊಲೀಸ್ ಹಾಗೂ ಮೂಡುಬಿದಿರೆ ಪೊಲೀಸರೊಂದಿಗೆ ನಿಡ್ಡೋಡಿಯ ಖಾಸಗಿ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದರು. ಇದನ್ನು ಪ್ರಶ್ನಿಸಿ ಸ್ಥಳೀಯ ಭೂಮಾಲಕರು ಮತ್ತು ಜನರು ವಿರೋಧ ವ್ಯಕ್ತಪಡಿಸಿದಾಗ ಕಂಪೆನಿ ಸಿಬಂದಿಗಳು ಸಾರ್ವಜನಿಕರೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆನ್ನಲಾಗಿದೆ. ಆಕ್ರೋಶಗೊಂಡ ಗ್ರಾಮಸ್ಥರು ಕಾಮಗಾರಿ ನಡೆಸದಂತೆ ತಡೆದರು.
ಸ್ಥಳದಲ್ಲಿದ್ದ ಮೂಡುಬಿದಿರೆ ಪೊಲೀಸರು ಕಂಪನಿಯವರಿಗೆ ಕಾನೂನು ರೀತ್ಯಾ ಮುಂದುವರಿಯುವಂತೆ ತಿಳಿಸಿದರು. ವಿವಾದ ಮುಂದುವರಿಯುತ್ತಲೆ ಮೂಡುಬಿದಿರೆ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ಥಳಕ್ಕೆ ಬಂದು ಭೂಮಾಲಕರು ಮತ್ತು ಕಂಪನಿಯವರ ಜೊತೆ ಮಾತುಕತೆ ನಡೆಸಿ ಸಧ್ಯ ಕಾಮಗಾರಿ ನಿಲ್ಲಿಸುವಂತೆ ಕಂಪನಿಯವರಿಗೆ ಸೂಚನೆ ನಿಡಿದರು.
ಕೂಡಲೇ ಸರ್ವೇ ಕಾರ್ಯಕ್ಕೆ ಅಗತ್ಯ ಇರುವ ಪ್ರದೇಶದ ಎಲ್ಲಾ ಭೂಮಾಲಕರಿಗೂ ಪ್ರಾಥಮಿಕ ಮಾಹಿತಿ ನೋಟೀಸ್ ನೀಡಿ ಅವರ ಸಮ್ಮುಖದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಜೊತೆಯಾಗಿ ಸರ್ವೇ ಕೆಲಸ ಮಾತ್ರ ಮಾಡಲು ತಿಳಿಸಿದರು.
ನಿಡ್ಡೋಡಿ -ಮಂಜನಬೈಲು ವ್ಯಾಪ್ತಿಯ 3ಕಿ.ಮೀ ವ್ಯಾಪ್ತಿಯಲ್ಲಿ ಸರ್ವೇಗೆ ಉಳಿದಿರುವ ಪ್ರದೇಶದಲ್ಲಿ ಸರ್ವೇ ನಡೆಸಲು ಮಾತ್ರ ನಮ್ಮ ಒಪ್ಪಿಗೆ ಹೊರತು ಯೋಜನೆ ಅನುಷ್ಠಾನಕ್ಕೆ ಅಲ್ಲ ಎಂದು ಭೂಮಾಲಕರು ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್‌ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಆಲ್ಪೋನ್ಸ್ ಡಿಸೋಜಾ, ಪ್ರಮುಖರಾದ ಚಂದ್ರಹಾಸ್ ಶೆಟ್ಟಿ, ವಲೇರಿಯನ್, ಸ್ಟೀವನ್, ಫ್ರಾನ್ಸಿಸ್, ಶಾಂತಿ ಮತ್ತಿತರರು ಇದ್ದರು.