ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿ ಸಮಯಪ್ರಜ್ಞೆ ಮೆರೆದ ಬಸ್ ಚಾಲಕನಿಗೆ ಸನ್ಮಾನ

ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿ ಸಮಯಪ್ರಜ್ಞೆ ಮೆರೆದ ಬಸ್ ಚಾಲಕನಿಗೆ ಸನ್ಮಾನ


ಮೂಡುಬಿದಿರೆ: ತೋಡಾರು ಬಂಗಬೆಟ್ಟು ಬಳಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಗೆ ಬಿದ್ದಿದ್ದ ಗಾಯಾಳನ್ನು  ಆಳ್ವಾಸ್ ಆಸ್ಪತ್ರೆಗೆ ಸಾಗಿಸಿ ಸಮಯಪ್ರಜ್ಞೆ ಮೆರೆದ ನಿಶ್ಮಿತಾ ಬಸ್ ಚಾಲಕ ಖಲಂದರ್ ಶಾಫಿ ಅವರನ್ನು 'ತುಳುವೆರ್ ಬೆದ್ರ' ಬಳಗದ ವತಿಯಿಂದ ಸನ್ಮಾನಿಸಲಾಯಿತು.

ತೋಡಾರು ಬಂಗಬೆಟ್ಟು ಬಳಿ ಎರಡು ದಿನಗಳ ಹಿಂದೆ ಕಾರು ಮತ್ತು ಬೈಕ್ ಢಿಕ್ಕಿ ಹೊಡೆದಿದ್ದ ಪರಿಣಾಮ ಮೋಹನ ಗೌಡ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೈಕ್ ನಲ್ಲಿದ್ದ ನಾರಾಯಣ ಗೌಡ ಎಂಬವರು ಗಂಭೀರ ಗಾಯಗೊಂಡು ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ನಿಶ್ಮಿತಾ ಬಸ್ ಚಾಲಕ ಖಲಂದರ್ ಶಾಫಿ ಅವರು ಗಾಯಾಳು ನಾರಾಯಣ ಗೌಡ ಅವರನ್ನು ಗಮನಿಸಿದ್ದಾರೆ. ಕೂಡಲೇ ಬಸ್ ನಿಲ್ಲಿಸಿ ಅದೇ ಬಸ್ ನಲ್ಲಿ ಗಾಯಾಳನ್ನು ಹಾಕಿಕೊಂಡು ಅಂಬುಲೆನ್ಸ್ ನಷ್ಟೇ ವೇಗವಾಗಿ ನೇರವಾಗಿ ಆಳ್ವಾಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಚಾಲಕನ ಸಮಯಪ್ರಜ್ಞೆಯಿಂದಾಗಿ ಗಾಯಾಳು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.

 ಚಾಲಕನ ಸಮಯಪ್ರಜ್ಞೆ ಮತ್ತು ಮಾನವೀಯ ಸೇವೆಯನ್ನು ಗಮನಿಸಿದ ' ತುಳುವೆರ್ ಬೆದ್ರ' ಬಳಗವು ಅವರನ್ನಿಂದು ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿದ್ದ ಮೊಬೈಲ್ ರಿಟೈಲರ್ಸ್ ನವರ ಕ್ರಿಕೆಟ್ ಪಂದ್ಯಾಟದ ವೇದಿಕೆಗೆ ಕರೆದು ಸನ್ಮಾನಿಸಿತು.

ತುಳುವೆರ್ ಬೆದ್ರ ಬಳಗದ ರಾಜೇಶ್ ಕಡಲಕೆರೆ, ಶೇಖರ್ ಬೊಳ್ಳಿ, ಕ್ಲಾರಿಯೋ ಮೂಡುಬಿದಿರೆ, ಅಶ್ಫಾಕ್ ಮಿಜಾರ್, ಸಂತೋಷ್ ಶೆಟ್ಟಿ ಮಿಜಾರ್, ಹಫೀಝ್ ತೋಡಾರ್, ಅಶ್ರಫ್ ವಾಲ್ಪಾಡಿ, ಇಬ್ರಾಹಿಂ ಹಂಡೇಲ್, ಇಬ್ರಾಹಿಂ ಬಂಟ್ವಾಳ, ಅಲ್ತಾಫ್ ಮೂಡುಬಿದಿರೆ, ದಿನೇಶ್ ಪೂಜಾರಿ, ಮೊಬೈಲ್ ರಿಡೈಲರ್ಸ್ ಸಂಘದ ಅಧ್ಯಕ್ಷ ಸಫ್ವಾನ್, ನವೀನ್ ಟಿ.ಆರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 ಸಮದ್ ಕಾಟಿಪಳ್ಳ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article