
ಬ್ಯಾಟರಿ ಕಳ್ಳರ ಬಂಧನ: ಪೊಲೀಸರನ್ನು ಶ್ಲಾಘಿಸಿದ ಅರ್ಥ್ ಮೂವರ್ಸ್ ಅಸೋಸಿಯೇಷನ್
ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಕಳೆದ ಕೆಲವು ಸಮಯಗಳಿಂದ ಹಿಟಾಚಿ, ಟಿಪ್ಪರ್ ಗಳಿಂದ ಬ್ಯಾಟರಿಗಳನ್ನು ಕಳವುಗೈಯುತ್ತಿದ್ದ ಆರೋಪಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ಬಂಧಿಸಿರುವುದನ್ನು ಅರ್ಥ್ ಮೂವರ್ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ತೋಡಾರು ರಂಜಿತ್ ಪೂಜಾರಿ ಮತ್ತು ಉಪಾಧ್ಯಕ್ಷ ರೋಹನ್ ಕಾರ್ಡೋಜಾ ಅವರು ಶ್ಲಾಘಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಟಾಚಿ, ಟಿಪ್ಪರ್ ಮುಂತಾದ ವಾಹನಗಳಿಗೆ ಕೆಲಸಗಳು ಕಡಿಮೆಯಾಗುತ್ತಿದ್ದು ವಾಹನದ ಮಾಲಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ವಾಹನಗಳಿಂದ ಬ್ಯಾಟರಿಗಳು ಕಳವು ಆದಾಗ ವಾಹನಗಳ ಯಜಮಾನರುಗಳು ಕಂಗಾಲಾಗಿದ್ದು ಅಸೋಸಿಯೇಶನ್ನಿಗೆ ದೂರು ನೀಡಿದ್ದರು.
ಬ್ಯಾಟರಿ ಕಳೆದುಕೊಂಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಸೋಸಿಯೇಷನ್ ಪೊಲೀಸರಿಗೆ ದೂರು ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ, ವ್ಯಾಪಕ ತನಿಖೆ ನಡೆಸಿ ಬ್ಯಾಟರಿ ಕಳ್ಳತನದ ಆರೋಪಿಗಳನ್ನು ಬಂಧಿಸಿರುವುದಕ್ಕೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ತಂಡಕ್ಕೆ ಅರ್ಥ್ ಮೂವರ್ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ತೋಡಾರು ರಂಜಿತ್ ಪೂಜಾರಿ ಮತ್ತು ಉಪಾಧ್ಯಕ್ಷ ರೋಹನ್ ಕಾರ್ಡೋಜಾ, ಮತ್ತು ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಆಧಿರಾಜ್ ಜೈನ್, ಅಧ್ಯಕ್ಷರಾದ ವಿನಯ್ ಹೆಗ್ಡೆ ನಾರಾವಿ, ಮತ್ತು ಕಾರ್ಯದರ್ಶಿ ರಾಕೇಶ್ ಅವರು ಶ್ಲಾಘನೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.