
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ
ಮುಲ್ಕಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ ಎನ್‌ಡಿಪಿಎಸ್ ಕಾಯ್ದೆ ಹಾಗೂ ಮಾದಕ ವಸ್ತುಗಳ ಕೆಲವು ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯಂತೆ ಕೋಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೈನೇ ಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ ಕಂಪನಿಯಲ್ಲಿ ನಾಶಪಡಿಸಲಾಯಿತು.
ಈ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ, ಸಾಗಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಅಪರಾಧ ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 2024ನೇ ಸಾಲಿನಲ್ಲಿ ಒಟ್ಟು 88 ಪ್ರಕರಣಗಳನ್ನು ದಾಖಲಿಸಿ 158 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ 7,51,99,930 ರೂ. ಬೆಲೆ ಬಾಳುವ ಸುಮಾರು 190 ಕೆಜಿ ಗಾಂಜಾ, 7.744 ಎಂಡಿಎಂಎ, ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, 2025ನೇ ಸಾಲಿನಲ್ಲಿ ಇದುವರೆಗೆ 5 ಪ್ರಕರಣಗಳನ್ನು ದಾಖಲಿಸಿ 9 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 73,75,000 ರೂ. ಬೆಲೆಬಾಳುವ ಗಾಂಜಾ ಎಂಡಿಎಂಎ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತು ಸೇವನೆಯ ಕುರಿತು 2024ನೇ ಸಾಲಿನಲ್ಲಿ 1244 ಜನರ ಮೇಲೆ 1026 ಪ್ರಕರಣಗಳನ್ನು ಮತ್ತು 2025ನೇ ಸಾಲಿನಲ್ಲಿ 37 ಜನರ ಮೇಲೆ 25 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ನ್ಯಾಯಾಲಯದ ಅನುಮತಿ ಪಡೆದು ಮಂಗಳೂರು ನಗರ ವ್ಯಾಪ್ತಿಯ 13 ಠಾಣೆಗಳ ಒಟ್ಟು 37 ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 6,80,86,558 ಮೌಲ್ಯದ 460 335 ಕೆ.ಜಿ. ಗ್ರಾಂ. ಗಾಂಜಾ, 7 ಕೆಜಿ 640 ಗ್ರಾಂ. ಎಂಡಿಎಂಎ ಮತ್ತು ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ ಕ್ರೈಂ ಕೆ. ರವಿಶಂಕರ್, ಎಸಿಪಿ ಶ್ರೀಕಾಂತ್, ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ, ವಿವಿಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗಳಾದ ನಾಗರಾಜ್ ಮೊಹಮ್ಮದ್ ಸಲೀಂ, ಅಜ್ಮತ್ ಅಲಿ, ಮಹೇಶ್ ಪ್ರಸಾದ್, ಶಿವಕುಮಾರ್, ರಾಜೇಂದ್ರ ಬಿ., ಸಂದೇಶ್ ಪಿ.ಜಿ., ಸಂದೀಪ್, ಕೋಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೈನೇ ಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಪ್ರಶಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.