
ಅಕ್ರಮ ಮರಳು ಸಾಗಾಟ: ಕುಸಿಯುವ ಭೀತಿಯಲ್ಲಿ ಸೇತುವೆ
ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಮುಲ್ಕಿಯ ಬಪ್ಪನಾಡು ಬಳಿಯ ಒಳ ರಸ್ತೆಯಿಂದ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಮೂಲಕ ಉಡುಪಿ ಜಿಲ್ಲೆಗೆ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಗ್ರಾಮೀಣ ಭಾಗದ ಜೀವನಾಡಿಯಾದ ಕಿರು ಸೇತುವೆ ಹಾಗೂ ಕಾಂಕ್ರೀಟ್ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಹೆಜಮಾಡಿ ಟೋಲ್ ತಪ್ಪಿಸಿ ಬಪ್ಪನಾಡು ದೇವಸ್ಥಾನದ ದ್ವಾರದ ಒಳ ರಸ್ತೆಯ ಮೂಲಕ ರಾತೋರಾತ್ರಿ ಹೊತ್ತು ಟಿಪ್ಪರ್ ಮೂಲಕ ಅಕ್ರಮವಾಗಿ ಮರಳು ಸಾಗಟ ಎಗ್ಗಿಲ್ಲದೆ ನಡೆಯುತ್ತಿದೆ.
ಅಕ್ರಮ ಮರಳು ಸಾಗಾಟದಿಂದ ಸುಮಾರು 3 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಅವರಾಲುಮಟ್ಟು, ಕೊಕ್ರಾಣಿ ಮತ್ತು ಕಕ್ವ ಸೇತುವೆಗಳು ಕುಸಿಯುವ ಭೀತಿ ಎದುರಿಸುತ್ತಿದ್ದು ಮುಲ್ಕಿ ಪೇಟೆಯ ಸಂಪರ್ಕ ಕಡಿದುಕೊಳ್ಳುವ ಸಂಕಷ್ಟ ಗ್ರಾಮೀಣ ಭಾಗದ ಜನರಿಗೆ ಉಂಟಾಗಿದೆ.
ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಜಯಕುಮಾರ್ ಮಟ್ಟು ಮಾತನಾಡಿ, ಅಕ್ರಮ ಮರಳು ಸಾಗಾಟದ ಬಗ್ಗೆ ಪಂಚಾಯತ್ ವಾರ್ಡ್ ಸಭೆಯಲ್ಲಿ ನಿರ್ಣಯ ಮಾಡಿದ್ದು ಮುಲ್ಕಿ ತಹಶೀಲ್ದಾರ್ ರವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸ್ಥಳೀಯರಾದ ಉದಯ ಅಮೀನ್ ಮಾತನಾಡಿ ಕೂಡಲೇ ಗಣಿ ವಿಜ್ಞಾನ ಇಲಾಖೆ ಅಕ್ರಮ ಮರಳು ಸಾಗಾಟ ನಿಲ್ಲಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.