ಕೋಮು ಸೌಹಾರ್ದತೆಗಾಗಿ ರಾಜ್ಯವ್ಯಾಪಿ ಸಮಾವೇಶ: ನಿಸಾರ್ ಅಹ್ಮದ್

ಕೋಮು ಸೌಹಾರ್ದತೆಗಾಗಿ ರಾಜ್ಯವ್ಯಾಪಿ ಸಮಾವೇಶ: ನಿಸಾರ್ ಅಹ್ಮದ್


ಮಂಗಳೂರು: ಸಮಾಜದಲ್ಲಿ ಕೋಮು ಸೌಹಾರ್ದತೆಗಾಗಿ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ನಿಸಾರ್ ಅಹ್ಮದ್ ಹೇಳಿದ್ದಾರೆ.

ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂದಿನ ಮುಂಗಡ ಪತ್ರದಲ್ಲಿ  ಅಲ್ಪಸಂಖ್ಯಾತರಿಗೆ ಸರ್ಕಾರ ಕೈಗೊಳ್ಳಬಹುದಾದ ಸವಲತ್ತುಗಳ ಕುರಿತು ಅವಿಭಜಿತ ದ.ಕ. ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರೊಂದಿಗೆ ಸಭೆ ನಡೆಸಿದರು.

ಕೋಮು ಸಾಮರಸ್ಯ ಅತ್ಯವಶ್ಯಕವಾಗಿದೆ. ಅದಕ್ಕಾಗಿ ಎಲ್ಲ ಸಮುದಾಯದ ಮುಖಂಡರನ್ನು ಕರೆಸಿ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ಕ್ರಿಯಾಯೋಜನೆಯಲ್ಲಿ ಗ್ರಾಮ ಮಟ್ಟದಿಂದ ತೊಡಗಿ ರಾಜ್ಯ ಮಟ್ಟದ ವರೆಗೆ ಪ್ರತ್ಯೇಕ ಕಾರ್ಯಕ್ರಮ ನಡೆಸುವ ಅಗತ್ಯತೆ ಇದೆ. ಎಲ್ಲ ಸಮುದಾಯದ ಜನರೂ ಮುಖ್ಯವಾಹಿನಿಯಲ್ಲಿ ಸೇರಬೇಕು ಎಂಬುದು ಸರ್ಕಾರದ ಅಪೇಕ್ಷೆ ಹಾಗೂ ಆಯೋಗದ ಉದ್ದೇಶವೂ ಆಗಿದೆ ಎಂದರು.

ಶಾಂತಿ ಸಮಿತಿ ಸಭೆ ಶಾಂತಿ ಕದಡಿದ ಬಳಿಕ ಆಗಬಾರದು, ಇದು ಪ್ರತಿ ಗ್ರಾಮ ಮಟ್ಟದಲ್ಲಿ 2 ತಿಂಗಳಿಗೊಮ್ಮೆ ಶಾಂತಿ ಸಮಿತಿ ಸಭೆ ನಡೆಯಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.

ಮಾಜಿ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಮಾತನಾಡಿ, ವಿದೇಶದಿಂದ ಆಗಮಿಸುವ ಅಲ್ಪಸಂಖ್ಯಾತರಿಗೆ ಸ್ವಉದ್ಯೋಗಕ್ಕೆ ಸರ್ಕಾರ ನೆರವಾಗಬೇಕೇಂದರು.

ಕೇಂದ್ರ ಸರ್ಕಾರದ ಯೋಜನೆಯಡಿ ಸೀ ಡಾಕ್ ಕಂಪನಿಯಿಂದ 200 ಮಂದಿ ಅಲ್ಪಸಂಖ್ಯಾತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಒಂದು ತಿಂಗಳ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಜೊತೆ ಮಾತುಕತೆ ನಡೆಸಲಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉದ್ಯೋಗ ಸೇರ್ಪಡೆಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಅಲ್ಪಸಂಖ್ಯಾತರಿಗೆ ನೀಡುವ ಸ್ಕಾಲರ್ಶಿಪ್ನ ಮೊತ್ತವನ್ನು ಹೆಚ್ಚಳಗೊಳಿಸಬೇಕು, ಜಾತಿ ಸರ್ಟಿಫಿಕೆಟ್ ಪಡೆಯುವಾಗಿನ ಆದಾಯದ ಮಾನದಂಡವನ್ನು ಹೆಚ್ಚಳಗೊಳಿಸಬೇಕು. ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಬೇಕು. ಅಲ್ಪಸಂಖ್ಯಾತ ಇಲಾಖಾ ವ್ಯಾಪ್ತಿಗೆ ಒಳಪಡುವ ಮುಸ್ಲಿಂ, ಕ್ರೈಸ್ತ, ಜೈನ, ಬುದ್ಧ, ಪಾರ್ಸಿ ಮುಂತಾದ ಸಮುದಾಯಗಳಿಗೂ ಸಮಾನ ಸವಲತ್ತು ಒದಗಿಸಬೇಕು ಎಂಬ ಆಗ್ರಹ ಕೇಳಿಬಂತು.

ಉಡುಪಿಯಲ್ಲಿ ಕಳೆದ 10 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸರಿಯಾಗಿ ಸವಲತ್ತುಗಳು ಸಿಗುತ್ತಿಲ್ಲ ಎಂಬ ದೂರು ವ್ಯಕ್ತವಾಯಿತು.

ಸವಲತ್ತು ವಂಚಿತ..:

ಅಲ್ಪಸಂಖ್ಯಾತರಿಗೆ ಎಲ್ಲ ಇಲಾಖೆಗಳಲ್ಲೂ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ಆದರೆ ಸಮಪರ್ಕವಾಗಿ ಅನುಷ್ಠಾನವಾಗುತ್ತಿಲ್ಲ. ಬಿಜೆಪಿ ಸಂಸದರು, ಶಾಸಕರು ಇರುವಲ್ಲಿ ಅಲ್ಪಸಂಖ್ಯಾತರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಮೊಯ್ದಿನಬ್ಬ ಅಸಮಾಧಾನ ವ್ಯಕ್ತಪಡಿಸಿದರು.

ಆಯೋಗದ ವಿಶೇಷ ಅಧಿಕಾರಿ ಜಫಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article