
ಫೆಬ್ರವರಿ ಅಂತ್ಯಕ್ಕೆ ಹೆದ್ದಾರಿ ಕಾಮಗಾರಿ ಪೂರ್ಣವಾಗದಿದ್ದರೆ ಸಂಚಾರ ತಡೆದು ಜಾಥಾ ಮೂಲಕ ಪ್ರತಿಭಟನೆ
ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಕಾಮಗಾರಿ ಕಳೆದ 8 ವರ್ಷಗಳಿಮದ ಕುಂಟುತ್ತಾ ಸಾಗುತ್ತಿರುವುದು ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ. ಜನತೆಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆದು ಮಾತನಾಡಿದ್ದೇನೆ. ಫೆಬ್ರವರಿ ಅಂತ್ಯದೊಳಗೆ ಉಪ್ಪಿನಂಗಡಿಯಿಂದ ಕಲ್ಲಡ್ಕ ತನಕದ ಕಾಮಗಾರಿಯನ್ನು ಮುಗಿಸದೇ ಇದ್ದಲ್ಲಿ ಹೆದ್ದಾರಿ ಸಂಚಾರ ತಡೆದು ಬೃಹತ್ ಜಾಥಾ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಅಶೋಕ್ ರೈ ಅವರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಮಾಣಿ ಕಲ್ಲಡ್ಕ ಹಾಗೂ ಉಪ್ಪಿನಂಗಡಿ ಭಾಗದಲ್ಲಿ ಕೇವಲ ಕೆಲವೇ ಮಂದಿ ಕಾರ್ಮಿಕರನ್ನು ಇಟ್ಟುಕೊಂಡು ಗುತ್ತಿಗೆದಾರರು ಕೆಲಸ ಮಾಡಿಸುತ್ತಿದ್ದಾರೆ. ಹೀಗಾದರೆ ಮುಂದಿನ ವರ್ಷವಾದರೂ ಕಾಮಗಾರಿ ಮುಗಿಯಲಾರದು. ಕನಿಷ್ಠ ಒಂದು ಭಾಗದಲ್ಲಾದರೂ ವಾಹನ ಸವಾರಿಗೆ ಸಂಕಷ್ಟವಾಗದಂತೆ ರಸ್ತೆ ಸಮರ್ಪಕಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದೂವರೆ ತಿಂಗಳೊಳಗೆ ಕಾಮಗಾರಿ ಪೂರ್ತಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಭರವಸೆ ಸುಳ್ಳಾದರೆ ಸಾವಿರಾರು ಮಂದಿ ಸೇರಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಶನಿವಾರ ಬೆಳಿಗ್ಗೆ ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಮಗಾರಿ ಮತ್ತು ಉಪ್ಪಿನಂಗಡಿಯಲ್ಲಿ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದ ಅಶೋಕ್ ರೈ ಅವರು ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡರು. ಮಾಣಿ- ಕಲ್ಲಡ್ಕ ಮಧ್ಯೆ ಒಂದು ಭಾಗದ ರಸ್ತೆಯನ್ನಾದರೂ ಶೀಘ್ರದಲ್ಲೇ ಸಂಚಾರ ಮುಕ್ತಗೊಳಿಸಿ. ಮುಂದಿನ ಮಳೆಗಾಲ ಆರಂಭಗೊಳ್ಳುವ ಮುನ್ನ ಪೂರ್ತಿ ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಮುಗಿಯಬೇಕು ಎಂದು ಸೂಚನೆ ನೀಡಿದರು.
ಕಾಮಗಾರಿ ವಿಳಂಬಗೊಂಡಿಲ್ಲ. ವೇಗವಾಗಿ ನಡೆಯುತ್ತಿದೆ ಎಂದು ಹೇಳುತ್ತಾ ಅಧಿಕಾರಿಗಳು ಸಮಜಾಯಿಷಿ ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಶಾಸಕರು, ನೀವು ಈಗಾಗಲೇ ಮುಗಿಸಿದ ಕೆಲಸದ ಬಗ್ಗೆ ಏನೂ ಹೇಳುತ್ತಿಲ್ಲ. ಆದರೆ ಆಗಬೇಕಾದ ಕೆಲಸ ಇನ್ನೂ ಸಾಕಷ್ಟಿದೆ. ಹೆಚ್ಚುವರಿ ಕಾರ್ಮಿಕರು ಮತ್ತು ಯಂತ್ರಗಳನ್ನು ಬಳಸಿಕೊಂಡು ಕಾಮಗಾರಿ ತ್ವರಿತಗೊಳಿಸಿ ಎಂದು ಸೂಚನೆ ನೀಡಿದರು.
ಕಾನೂನು ಸುವ್ಯವಸ್ಥೆ ಸಡಿಲ:
ಜಿಲ್ಲೆಯಲ್ಲಿ ಹಾಡುಹಗಲೇ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಕಳ್ಳರಿಗೆ ಪೊಲೀಸರ ಭಯವೇ ಇದ್ದಂತೆ ಕಾಣುವುದಿಲ್ಲ. ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ ಇಲ್ಲವೂ ಎಂಬ ಸಂಶಯ ಜನಸಾಮಾನ್ಯರಿಗೆ ಕಾಡುವಂತಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಡಿಲಗೊಂಡತೆ ಕಾಣುತ್ತಿದೆ ಎಂದು ಅಶೋಕ್ ರೈ ಹೇಳಿದರು.
ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ನಡೆದಿದೆ. ಕೆಲ ಕಡೆಗಳಲ್ಲಿ ಮನೆಯಿಂದಲೂ ಕಳ್ಳರು ಹಣ ಒಡವೆ ದೋಚಿದ್ದಾರೆ. ಈ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ. ಕಾರಣ ಹೊಡೆದರೆ, ಶೂಟೌಟ್ ಮಾಡಿದರೆ ಮಾನವ ಹಕ್ಕು ಆಯೋಗ ಬರುತ್ತದೆ. ಹಾಗಾಗಿ ಕಳ್ಳರು ಬಚಾವಾಗುತ್ತಿದ್ದಾರೆ. ಕಾನೂನಿನ ಹಂತವನ್ನು ಮೀರಿ ಪೊಲೀಸರು ಕ್ರಮಕ್ಕೆ ಮುಂದಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಪರಾಧಿಗಳಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಆಗುವುದು ಕಂಡು ಬರುತ್ತಿಲ್ಲ. ಇದು ನಮ್ಮ ದುರದೃಷ್ಟವಾಗಿದೆ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ತೀವ್ರ ಕಾರ್ಯಾಚರಣೆ ಪೊಲೀಸರಿಂದಾಗುತ್ತಿದೆ. ಮುಂದಿನ ಎರಡು ದಿನಗಳೊಳಗೆ ಅಪರಾಧಿಗಳನ್ನು ಬಂಧಿಸುವ ಕಾರ್ಯವನ್ನು ನಡೆಸಲಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೂ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮಸಕ್ರಮ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಇದ್ದರು.