
ಹಾಡುಹಗಲು ಮನೆ ದೋಚುತ್ತಿದ್ದ ಆರೋಪಿ ಬಂಧನ: 18 ಲಕ್ಷ ರೂ. ಚಿನ್ನಾಭರಣ ವಶ: ಸುಷ್ಮಾ ಭಂಡಾರಿ ಸಾಧನೆ
ಪುತ್ತೂರು: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದ ಗಮನಿಸಿ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿರುವ ಪ್ರಕರಣಗಳು ದಕ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಪುತ್ತೂರಿನ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ಡಿ.20ರಂದು ಮನೆಯೊಂದರ ಹಿಂಬಾಗಿಲು ಮುರಿದು ಇದೇ ರೀತಿ ನಡೆದ ಕಳ್ಳತನದ ಜಾಡು ಹಿಡಿದು ಹೊರಟ ಗ್ರಾಮಾಂತರ ಠಾಣಾ ಪಿಎಸ್‌ಐ ಸುಷ್ಮಾ ಜಿ ಭಂಡಾರಿ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಾಸರಗೋಡು ಉಪ್ಪಳ ಗುಡ್ಡಮನೆಯ ಮೂಲ ನಿವಾಸಿ, ಪ್ರಸ್ತುತ ಕಾಸರಗೋಡು ಮಂಜೇಶ್ವರ ಹೊಸಂಗಡಿಯ ಮೂಡಂಬೈಲು ನವಿಲುಗಿರಿ ನಿವಾಸಿಯಾಗಿರುವ ಸೂರಜ್ ಕೆ (36) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಕಳ್ಳತನಕ್ಕೆ ಬಳಕೆ ಮಾಡುತ್ತಿದ್ದ ಕಾರು ಸಹಿತ ವಿವಿಧ ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿ ರೂ.18 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಸಹಿತ ಒಟ್ಟು ರೂ.21 ಲಕ್ಷ ಮೌಲ್ಯದ ವಸ್ತುಗಳನ್ನು ಈತನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಮಾಹಿತಿಯಂತೆ ಭಕ್ತಕೋಡಿ, ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮದ ಇರಾ ಹಾಗೂ ವಿಟ್ಲ ಠಾಣೆಯ ಕೊಲ್ನಾಡು ಗ್ರಾಮದ ಕುಂಟುಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆಮಜಲು ಎಂಬಲ್ಲಿ ಮನೆಗಳಲ್ಲಿ ಕಳ್ಳತನ ನಡೆಸಿದ್ದಾಗಿ ತಿಳಿದುಬಂದಿದೆ.
ಹಾಡುಹಗಲೇ ಕಳ್ಳತನ:
ಹಾಡುಹಗಲೇ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಆ ಮನೆಗೆ ಹಿಂಬಾಗಿಲ ಮೂಲಕ ನುಗ್ಗಿ ಈತ ಕಳ್ಳತನ ಮಾಡುತ್ತಿದ್ದ. ಬಳಿಕ ಯಾವುದೇ ಸುಳಿವು ನೀಡದ ಪರಾರಿಯಾಗುತ್ತಿದ್ದ. ಆಲಂಕಾರು ಗ್ರಾಮದ ಕಲ್ಲೇರಿ ಎಂಬಲ್ಲಿನ ಆಲಂಕಾರು-ಶಾಂತಿಮೊಗರು ರಸ್ತೆ ಸಮೀಪದಲ್ಲಿಯೇ ಇರುವ ಸುಧಾಕರ ಪೂಜಾರಿ ಅವರ ಮನೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಕಳ್ಳತನ ಮಾಡಲಾಗಿತ್ತು. ಮನೆಯ ಯಜಮಾನ ಸುಧಾಕರ ಪೂಜಾರಿ ಅವರು ಪೇಟೆಗೆ ಹೋಗಿದ್ದರು. ಅವರ ಪತ್ನಿ ಸೌಮ್ಯಲತಾ ತಮ್ಮ ಅಡಿಕೆ ತೋಟಕ್ಕೆ ಹೋದ ಸಂದರ್ಭ ಕಳ್ಳತನ ನಡೆದಿತ್ತು. ಈತ ಜಿಲ್ಲೆಯಾದ್ಯಂತ ನಡೆಸುತ್ತಿದ್ದ ಇಂತಹ ಕೃತ್ಯದ ಹಿಂದೆ ಹೊರಟ ವಿಶೇಷ ತಂಡ ಇದೀಗ ಜ.೧೧ರಂದು ಆರೋಪಿಯನ್ನು ಬಂಧಿಸಿದೆ.
ವಿಶೇಷ ತಂಡ ಕಾರ್ಯಾಚರಣೆ:
ಸಂಪ್ಯ ಠಾಣಾ ಪಿಎಸ್‌ಐ ಸುಷ್ಮಾ ಜಿ.ಭಂಡಾರಿ ಅವರ ನೇತೃತ್ವದ ಈ ವಿಶೇಷ ತಂಡದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ನಾಗರಾಜ್ ಹೆಚ್, ಎಎಸ್‌ಐ ಮುರುಗೇಶ್, ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ, ಸ್ಕರಿಯ, ಅದ್ರಾಮ್, ಹರೀಶ್ ಗೌಡ, ಹರೀಶ್ಚಂದ್ರ, ಹರ್ಷಿತ್ ಗೌಡ, ಚಂದ್ರಶೇಖರ ಗೆಜ್ಜೆಳ್ಳಿ, ಶರಣಪ್ಪ ಪಾಟೇಲ್, ಶಂಕರ ಸಂಶಿ, ಗದಿಗಪ್ಪ, ವಿವೇಕ್, ಕುಮಾರ್ ಹೆಚ್., ನಾಗೇಶ್ ಕೆಸಿ, ಗಣಕಯಂತ್ರ ವಿಭಾಗದ ದಿವಾಕರ್, ಸಂಪತ್ ಚಾಲಕರಾದ ಎ.ಆರ್.ಎಸ್. ಐ ಯೋಗೇಶ್ ಹಾಗೂ ನಿತೇಶ್ ಕರ್ನೂರು ಅವರು ಭಾಗಿಯಾಗಿದ್ದು, ಈ ತಂಡಕ್ಕೆ ಪೊಲೀಸ್ ಅಧೀಕ್ಷಕರು ವಿಶೇಷ ಬಹುಮಾನ ಘೋಷಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್ ಅವರು ಈ ವಿಶೇಷ ತಂಡ ರಚಿಸಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಯ ಬಂಧನಕ್ಕೆ ಮಾರ್ಗದರ್ಶನ ನೀಡಿದ್ದರು.